ಸಾರಾಂಶ
ಹಾವೇರಿ: ಶಿಗ್ಗಾಂವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಬಂಡಾಯ ಸಾರಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ನಡೆಯತ್ತ ಕೈ ನಾಯಕರ ಚಿತ್ತ ನೆಟ್ಟಿದೆ. ನಾಮಪತ್ರ ಹಿಂಪಡೆಯುತ್ತಾರಾ ಅಥವಾ ಕಣದಲ್ಲೇ ಮುಂದುವರಿದು ಕಾಂಗ್ರೆಸ್‌ಗೆ ಮಗ್ಗಲು ಮುಳ್ಳಾಗುತ್ತಾರಾ ಎಂಬುದು ಬುಧವಾರ ಗೊತ್ತಾಗಲಿದೆ.
ಶಿಗ್ಗಾಂವಿ ಉಪಚುನಾವಣೆಯಲ್ಲಿ ಯಾಸೀರ್ ಖಾನ್ ಪಠಾಣ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅದೇ ಪಕ್ಷದ ಅಜ್ಜಂಪೀರ್ ಖಾದ್ರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅ. 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವುದರಿಂದ ಖಾದ್ರಿ ನಡೆ ಬಗ್ಗೆ ಕುತೂಹಲ ಹೆಚ್ಚಿದೆ. ಖಾದ್ರಿ ಸಾಮರ್ಥ್ಯದ ಅರಿವಿರುವ ಕೈ ನಾಯಕರು ಅವರಿಂದ ನಾಮಪತ್ರ ಹಿಂಪಡೆಯುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿದ್ದಾರೆ.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಈಗಾಗಲೇ ಸಂಧಾನ ಸಭೆ ನಡೆಸಿ ಒಂದು ಹಂತದಲ್ಲಿ ಖಾದ್ರಿಯವರ ಮನವೊಲಿಸಿದ್ದಾರೆ. ಈ ಬಗ್ಗೆ ಖಾದ್ರಿ ಅವರೇ ಖಚಿತಪಡಿಸಿದ್ದರು. ಆದರೆ, ಸೋಮವಾರ ಖಾದ್ರಿ ಮತ್ತೆ ಉಲ್ಟಾ ಹೇಳಿಕೆ ನೀಡಿ ಕೈ ನಾಯಕರನ್ನು ಚಿಂತೆಗೆ ನೂಕಿದ್ದಾರೆ. ಖಾದ್ರಿ ಕ್ಷೇತ್ರದಲ್ಲೇ ಇದ್ದರೆ ಅವರ ಬೆಂಬಲಿಗರ ಒತ್ತಡಕ್ಕೆ ಮಣಿದು ಕಣದಲ್ಲೇ ಉಳಿಯಬಹುದು ಎಂಬ ಕಾರಣಕ್ಕೆ ಮೂರು ದಿನಗಳಿಂದ ಖಾದ್ರಿ ಅವರನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳಲಾಗಿದೆ. ಪಕ್ಷದ ನಾಯಕರ ಒತ್ತಡಕ್ಕೆ ಖಾದ್ರಿ ಬಹುತೇಕ ಮಣಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ಬೆಂಬಲಿಗರು ಪಟ್ಟು ಹಿಡಿದರೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಕೇವಲ10 ನಿಮಿಷವಿರುವಾಗ ಓಡೋಡಿ ಬಂದು ನಾಮಪತ್ರ ಸಲ್ಲಿಸಿದಂತೆ ಕೊನೆ ಗಳಿಗೆಯಲ್ಲಿ ಕಣದಲ್ಲೇ ಉಳಿಯುವ ತೀರ್ಮಾನಕ್ಕೆ ಬಂದರೆ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂದು ಬೆಂಬಲಿಗರೊಂದಿಗೆ ಸಭೆ: ಮಂಗಳವಾರ ಸಂಜೆಯೇ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಹುಬ್ಬಳ್ಳಿಗೆ ಖಾದ್ರಿ ಬಂದಿಳಿದಿದ್ದಾರೆ. ಬುಧವಾರ ಬೆಳಗ್ಗೆ ತಡಸ ಕ್ರಾಸ್‌ನಲ್ಲಿರುವ ಯಾತ್ರಿ ನಿವಾಸದಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದಕ್ಕೆ ಸರಿಯದಂತೆ ಒತ್ತಡ ಹೇರಲು ಬೆಂಬಲಿಗರು ತಯಾರಾಗಿ ನಿಂತಿದ್ದಾರೆ. ಆದರೆ, ತೀರಾ ಹಗ್ಗಜಗ್ಗಾಟ ನಡೆಸಿ, ಸೆಡ್ಡು ಹೊಡೆದು ನಿಂತರೆ ಮುಂದೆ ಪಕ್ಷದಲ್ಲಿ ಸ್ಥಾನಮಾನ ಸಿಗುವುದು ಕಷ್ಟವಾಗುವುದರಿಂದ ಖಾದ್ರಿ ಅವರು ತಮ್ಮ ಬೆಂಬಲಿಗರಿಗೆ ಮನದಟ್ಟು ಮಾಡಿ ಬುಧವಾರ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.