ಅಖಂಡ ಕರ್ನಾಟಕ ಬಂದ್ ರಾಮನಗರ ಜಿಲ್ಲೇಲಿ ವಿಫಲ

| Published : Mar 23 2025, 01:31 AM IST

ಸಾರಾಂಶ

ಮರಾಠಿಗರ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಶನಿವಾರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದ ಅಖಂಡ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲಗೊಂಡಿತು.

ಕನ್ನಡಪ್ರಭ ವಾರ್ತೆ ರಾಮನಗರ

ಮರಾಠಿಗರ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಶನಿವಾರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದ ಅಖಂಡ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲಗೊಂಡಿತು.

ಜಿಲ್ಲಾ ಕೇಂದ್ರ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಬಂದ್ ಗೆ ಸ್ಪಂದನೆಯೇ ಸಿಗಲಿಲ್ಲ. ಜಿಲ್ಲೆಯ ನಗರ, ಪಟ್ಟಣ ಹಾಗೂ ಹೋಬಳಿಗಳಲ್ಲಿ ಜನ ಜೀವನ ಸಹಜ ಸ್ಥಿತಿಯಲ್ಲಿತ್ತು. ವರ್ತಕರು ಎಂದಿನಂತೆ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. 4ನೇ ಶನಿವಾರದ ಕಾರಣ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಬಂದ್ ಆಗಿದ್ದವು.

ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲು ಸಾಧ್ಯವಿಲ್ಲದ ಕಾರಣ ಎಂದಿನಂತೆ ಶಾಲೆಗಳು ತೆರೆದಿದ್ದವು. ಇನ್ನು ದೈನಂದಿನ ಅವಶ್ಯಕ ವಸ್ತುಗಳಾದ ಹಾಲು ಸರಬರಾಜು, ದಿನಪತ್ರಿಕೆ, ವೈದ್ಯಕೀಯ ಸೇವೆ, ಔಷಧ ಅಂಗಡಿಗಳು, ಆಂಬ್ಯುಲೆನ್ಸ್‌, ಹೂವು, ಹಣ್ಣು, ತರಕಾರಿ, ಹೋಟೆಲ್‌ಗಳು, ಸೂಪರ್‌ ಮಾರ್ಕೆಟ್‌ಗಳು, ರೈಲು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇವೆ ಸಾಮಾನ್ಯದಂತೆ ಇದ್ದವು. ಬೀದಿಬದಿ ವ್ಯಾಪಾರ ವ್ಯವಹಾರ ಎಂದಿನಂತೆ ನಡೆಯಿತು.

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ತೆರೆದಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದವು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಎಂದಿನಂತೆ ಇತ್ತು. ಆಟೋರಿಕ್ಷಾ, ಗೂಡ್ಸ್‌ ವಾಹನಗಳ ಸೇವೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ.

ಜಿಲ್ಲಾ ಕೇಂದ್ರ ರಾಮನಗರದ ಮೈಸೂರು - ಬೆಂಗಳೂರು ಹೆದ್ದಾರಿ ಬದಿ, ಹಳೇ ಬಸ್ ನಿಲ್ದಾಣ ವೃತ್ತ, ರೇಲ್ವೆ ನಿಲ್ದಾಣ ರಸ್ತೆ, ಮಹಾತ್ಮಗಾಂ (ಎಂ.ಜಿ) ರಸ್ತೆ, ಕಾಯಿಸೊಪ್ಪಿನ ಬೀದಿ, ಟ್ರೂಪ್ ಲೈನ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಮುಚ್ಚದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ರಾಮನಗರದ ಹಳೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿನ ಐಜೂರು ವೃತ್ತದಲ್ಲಿ ಕರುನಾಡ ಸೇನೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗಷ್ಟೇ ಬಂದ್ ಸೀಮಿತವಾಗಿತ್ತು.ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ ಐಜೂರು ಮಾತನಾಡಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ, ಜಲ ವಿಚಾರದಲ್ಲಿ ತಮಿಳುನಾಡು ಪದೆಪದೇ ಕ್ಯಾತೆ ತೆಗೆಯುತ್ತಿವೆ. ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಕನ್ನಡಿಗರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್ ರವರು ಮರಾಠಿಗರಂತೆ ವರ್ತಿಸುತ್ತಿದ್ದಾರೆಯೇ ಹೊರತು ಕನ್ನಡಿಗರ ಪರವಾಗಿ ನಿಂತಿಲ್ಲ. ಇಂತಹ ಸಚಿವರು, ಶಾಸಕರಿಂದ ಕನ್ನಡಿಗರಿಗೆ ನ್ಯಾಯ ಸಿಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದರು. ಈಗ ಮೇಕೆದಾಟು ಯೋಜನೆ ಕುರಿತು ಚಕಾರವೇ ಎತ್ತುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಪಂಕ್ಚರ್ ಆಗಿವೆ. ಅಂತಹ ಗ್ಯಾರಂಟಿ ಯೋಜನೆಗಳು ಬೇಕಾಗಿಲ್ಲ. ಕನ್ನಡಿಗರಿಗೆ ರಕ್ಷಣೆ ನೀಡುವ ಜೊತೆಗೆ ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಜಗದೀಶ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇನೆ ಸಂಘಟನೆ ಮುಖಂಡರಾದ ವಿ.ಎನ್ .ಗಂಗಾಧರ್, ಆರ್.ಜೆ.ಅರ್ಜುನ್ , ರಾ.ಶಿ.ಬಸವರಾಜು, ಕುಮಾರ್ , ಭಾಗ್ಯ ಸುಧಾ, ಮಂಜುನಾಥ್, ಕೃಷ್ಣಮೂರ್ತಿ, ಪ್ರಸನ್ನ, ಹೇಮಾವತಿ, ಮಹೇಂದ್ರಮ್ಮ, ಸುಶೀಲಮ್ಮ, ಸುಜಾತ ಮತ್ತಿತರರು ಭಾಗವಹಿಸಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್:

ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ಅಹಿತಕರ ಘಟನೆ ನಡೆಯಂದೆ ಕಟ್ಟೆಚ್ಚರ ವಹಿಸಲಾಗಿತ್ತು.

ತಾಲೂಕುಗಳಲ್ಲಿಯೂ ಬಂದ್ ಗೆ ನೀರಸ ಪ್ರತಿಕ್ರಿಯೆ

ಮಾಗಡಿ ತಾಲೂಕಿನಲ್ಲಿಯೂ ಬಂದ್ ಸಂಪೂರ್ಣ ವಿಫಲವಾಗಿದೆ. ಪಟ್ಟಣದ ಆರ್ .ಆರ್ ರಸ್ತೆ, ರಾಜ್ ಕುಮಾರ ರಸ್ತೆ, ಬಿ.ಕೆ.ರಸ್ತೆ, ಮಾರ್ಕೆಟ್ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ವರ್ತಕರು ತೆರೆದು ವಹಿವಾಟಿನಲ್ಲಿ ತೊಡಗಿದ್ದರು.

ಕರ್ನಾಟಕ ಬಂದ್ ಗೆ ಚನ್ನಪಟ್ಟಣದಲ್ಲಿಯೂ ಉತ್ತಮ ಸ್ಪಂದನೆ ಸಿಕ್ಕಿಲ್ಲ. ನಗರದ ವಾಣಿಜ್ಯ ಕೇಂದ್ರಗಳಾದ ಎಂ.ಜಿ.ರಸ್ತೆ, ಮಾರ್ಕೆಟ್ ರಸ್ತೆ, ಬಿ.ಟಿ.ರಾಮು ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳನ್ನು ವರ್ತಕರು ತೆರೆದು ವ್ಯಾಪಾರ ವಹಿವಾಟು ನಡೆಸಿದರು. ವಾಹನ ಸಂಚಾರ, ಜನ ಜೀವನ ಮಾಮೂಲಿಯಾಗಿತ್ತು.ಕನಕಪುರ ಮತ್ತು ಹಾರೋಹಳ್ಳಿಯಲ್ಲಿಯೂ ಬಂದ್ ಗೆ ಬೆಂಬಲ ವ್ಯಕ್ತವಾಗಿಲ್ಲ. ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರೆದು ವರ್ತಕರು ವ್ಯಾಪಾರದಲ್ಲಿ ತೊಡಗಿದ್ದರು.