ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಳಗ್ಗೆಯಿಂದ ಇಡೀ ರಾತ್ರಿ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ, ಅಖಂಡ ಭಜನೆ ಮತ್ತು ರಾಶಿ ಪೂಜೆ ಕಾರ್ಯಕ್ರಮ ನಡೆಯಲಿವೆ.ಮಹಾ ಶಿವರಾತ್ರಿ ಹಬ್ಬದ ಹಿನ್ನಲೆ ಶ್ರೀ ಮಠದ ಶ್ರೀ ಕಾಲಭೈರವೇಶ್ವರಸ್ವಾಮಿ ಹಾಗೂ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಅಖಂಡ ಭಜನೆಗೆ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡುವರು. ಕ್ಷೇತ್ರದಲ್ಲಿ ರಾತ್ರಿಯಿಡೀ ಅಖಂಡ ಭಜನೆ, ಶಿವನಾಮ ಸ್ಮರಣೆ ನಡೆಯಲಿವೆ.
ಕ್ಷೇತ್ರದ ಧಾರ್ಮಿಕ ಆಚರಣೆಯಲ್ಲಿ ಪ್ರಮುಖವಾದ ಜ್ವಾಲಾಪೀಠಾರೋಹಣವನ್ನು ಶ್ರೀ ನಿರ್ಮಲಾನಂದನಾಥಸ್ವಾಮಿಜಿ ಶುಕ್ರವಾರ ರಾತ್ರಿ ನೆರವೇರಿಸುವರು. ಸರ್ವಾಲಂಕೃತ ಸಿದ್ಧಸಿಂಹಾಸನದ ಮೇಲೆ ಆಸೀನರಾಗಿ ಶ್ರೀಗಳು ಭಕ್ತರಿಗೆ ದರ್ಶನಾಶೀರ್ವಾದ ನೀಡುವರು. ಈ ವೇಳೆ ಷೋಡಶೋಪಚಾರ ಪೂಜಾ ಕೈಂಕರ್ಯಗಳು ನೆರವೇರಲಿವೆ.ಮಹಾಶಿವರಾತ್ರಿ ಜಾಗರಣೆ ಮುಗಿದ ನಂತರ ಶನಿವಾರ ಬೆಳಗಿನ ಜಾವ ಶ್ರೀಮಠದ ಸಂಪ್ರದಾಯದಂತೆ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಶ್ರೀಗಳು ರಾಶಿ ಪೂಜೆ ಮಾಡುವರು ಎಂದು ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
ಲಕ್ಷದೀಪೋತ್ಸವ:ಪಟ್ಟಣದ ಪುರಾಣೇತಿಹಾಸ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಸಂಜೆ 25ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಪ್ರತಿ ವರ್ಷ ಜರುಗುವ ಸರ್ವಾಲಂಕೃತ ಮತ್ತು ವೈಭವಯುತ ಲಕ್ಷದೀಪೋತ್ಸವದ ಅಂಗವಾಗಿ ಶುಕ್ರವಾರ ಬೆಳಗಿನಿಂದ ಶ್ರೀ ಸೌಮ್ಯಕೇಶವಸ್ವಾಮಿಗೆ ವಿಶೇಷ ಅಲಂಕಾರ, ತೋಮಾಲೆ ಸೇವೆ, ಅಷ್ಟೋತ್ತರ, ಸಹಸ್ರನಾಮ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.ಸಂಜೆ 7ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿನ 48ಅಡಿ ಎತ್ತರದ ಗರುಡ ಕಂಭಕ್ಕೆ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಆಚರಣಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸೀತಾಪತಿ ದೇವರ ಜಾತ್ರಾ ಮಹೋತ್ಸವ:ತಾಲೂಕಿನ ಹರಳಕೆರೆ ಗ್ರಾಮದ ಹೊರವಲಯದ ಶ್ರೀ ಸೀತಾಪತಿ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಜಾತ್ರಾ ಮಹೋತ್ಸವ ಮತ್ತು ಧೂಪಸೇವಾ ಕಾರ್ಯ ನಡೆಯಲಿದೆ.
ಗ್ರಾಮದ ಶ್ರೀಮಂಚಮ್ಮದೇವಿ ದೇವಸ್ಥಾನದಿಂದ ಶ್ರೀ ಸೀತಾಪತಿ ಸ್ವಾಮಿಯ ಬಿರುದು ಮತ್ತು ಪೂಜಾ ಸಾಮಾಗ್ರಿಗಳ ಹೊರೆಹೊತ್ತು ಪಾದಯಾತ್ರೆಯಲ್ಲಿ ಸೀತಾಪತಿ ದೇವರ ಸನ್ನಿಧಾನಕ್ಕೆ ಬಂದು ಶ್ರೀರಾಮದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ನಂತರ ನಡೆಯುವ ಪಟ್ಟಾಭಿಷೇಕ, ಮಹಾಮಂಗಳಾರತಿ, ಧೂಪಸೇವೆ, ಮುಡಿಸೇವೆ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಬರುವ ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.