ಸಂಕಷ್ಟದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಕ್ಷಿಪ್ರ ರಕ್ಷಣೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅಕ್ಕ ಪಡೆಯನ್ನು ಉಡುಪಿ ಜಿಲ್ಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಉದ್ಘಾಟಿಸಿದರು.
ಉಡುಪಿ: ಸಂಕಷ್ಟದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಕ್ಷಿಪ್ರ ರಕ್ಷಣೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅಕ್ಕ ಪಡೆಯನ್ನು ಉಡುಪಿ ಜಿಲ್ಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಿದರು.ಈ ಸಂದರ್ಭ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಜಿಪಂ ಮುಕಾನಿ ಅಧಿಕಾರಿ ಪ್ರತೀಕ್ ಬಾಯಲ್ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನುರಾಧಾ ಉಪಸ್ಥಿತರಿದ್ದರು.
ಅಪಾಯದಲ್ಲಿರುವ ಅಥವಾ ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯಹಸ್ತ ಚಾಚುವುದು ಈ ಪಡೆಯ ಉದ್ದೇಶವಾಗಿದೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಘನತೆ, ಸಬಲೀಕರಣ, ಶಿಕ್ಷಣ, ಹಕ್ಕುಗಳು, ಕಾನೂನುಗಳು ಲಭ್ಯವಿರುವ ಬೆಂಬಲ ವ್ಯವಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ, ಭಯ ಮುಕ್ತ ವಾತಾವರಣ ಸೃಷ್ಟಿಸುವ ಕೆಲಸವನ್ನು ಈ ಪಡೆ ಮಾಡಲಿದೆ.ಈ ಪಡೆಯಲ್ಲಿ ತರಬೇತಿ ಪಡೆದ ಮಹಿಳಾ ಗೃಹರಕ್ಷಕರಿದ್ದು, ಸ್ಥಳೀಯ ಪೊಲೀಸರ ನಿಕಟ ಸಹಯೋಗದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮಾಡುತ್ತಾರೆ ಮತ್ತು ಮಹಿಳೆಯರ ಮತ್ತು ಮಕ್ಕಳ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಾರೆ. ಅಗತ್ಯವಿದ್ದರೆ ಮಕ್ಕಳ ಕಲ್ಯಾಣ ಸಮಿತಿಗಳು, ಮಹಿಳಾ ಸಹಾಯವಾಣಿಗಳು, ಸರ್ಕಾರೇತರ ಸಂಸ್ಥೆಗಳು, ಕಾನೂನು ನೆರವು ಮತ್ತು ಆಶ್ರಯ ತಾಣಗಳೊಂದಿಗೆ ಸಂಪರ್ಕ ಕಲ್ಪಿಸಿ ಆಪ್ತ ಸಮಾಲೋಚನೆಗೂ ವ್ಯವಸ್ಥೆ ಮಾಡುತ್ತಾರೆ. ಅಕ್ಕಪಡೆಯನ್ನು ಶಾಲೆ, ಕಾಲೇಜು, ಮಹಿಳಾ ಹಾಸ್ಟೆಲ್, ಬಸ್ರೈ, ರೈಲು ನಿಲ್ದಾಣಗಳು, ಮಾರುಕಟ್ಟೆ, ಪ್ರೇಕ್ಷಣಿಯ ಸ್ಥಳಗಳು, ಪವಿತ್ರ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗುವುದು.