ಭೋಜನಪ್ರಿಯರಿಗಾಗಿ ಶೀಘ್ರ ಅಕ್ಕನ ಮನೆ ಮೀನೂಟ

| Published : Jul 18 2025, 12:45 AM IST

ಸಾರಾಂಶ

ಜಿಲ್ಲೆಯೊಳಗೆ ಮೀನೂಟಕ್ಕೆ ಹೆಚ್ಚಿನ ಮಹತ್ವ ದೊರಕಿಲ್ಲ. ಮೀನೂಟ ಎಂದರೆ ಮುಳ್ಳಿಗೆ ಹೆದರುವವರೇ ಹೆಚ್ಚು. ಪೋಷಕಾಂಶಗಳ ಭಂಡಾರವನ್ನೇ ಹೊಂದಿರುವ ಮೀನಿನ ಖಾದ್ಯ ಆರೋಗ್ಯದಾಯಕ ಆಹಾರವಾಗಿದೆ. ಸಾಮಾನ್ಯವಾಗಿ ಜಿಲ್ಲೆಯೊಳಗೆ ಮೀನು ಸೇವಿಸುವವರಲ್ಲಿ ಕೆರೆ ಮೀನುಗಳ ಸವಿಯನ್ನು ಸವಿದಿದ್ದಾರೆಯೇ ವಿನಃ ಸಮುದ್ರ ಮೀನುಗಳ ಖಾದ್ಯವನ್ನು ಸವಿದಿರುವವರು ಅಪರೂಪ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರ ಆರ್ಥಿಕ ಬಲವರ್ಧನೆ ಹಾಗೂ ಉತ್ತಮ ಪೋಷಕಾಂಶವಿರುವ ಮೀನಿನ ಸೇವನೆಯ ಮಹತ್ವವನ್ನು ತಿಳಿಸುವ ಧ್ಯೇಯೋದ್ದೇಶದೊಂದಿಗೆ ‘ಅಕ್ಕನ ಮನೆ ಮೀನೂಟ’ ಹೆಸರಿನಲ್ಲಿ ಸಂಚಾರಿ ಕ್ಯಾಂಟೀನ್ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಸಣ್ಣ ಕ್ಯಾಂಟೀನ್‌ಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಶೀಘ್ರದಲ್ಲೇ ಆರಂಭಿಸಲಾಗುತ್ತಿದೆ

ಮಂಗಳೂರಿನ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ೧೧ ಸಂಚಾರಿ ಮೀನಿನ ಕ್ಯಾಂಟೀನ್‌ಗಳು ಹಾಗೂ ಜನದಟ್ಟಣೆ ಹೆಚ್ಚಿರುವ ಸ್ಥಳಗಳು ಹಾಗೂ ಪ್ರವಾಸಿಗರು ಹೆಚ್ಚು ಆಗಮಿಸುವ ಸ್ಥಳಗಳನ್ನು ಗುರುತಿಸಿ ೧೫ ಮೀನಿನ ಸಣ್ಣ ಕ್ಯಾಂಟೀನ್ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದ ಸ್ವಾವಲಂಬನೆ ಜೀವನ ಬಯಸಿ ಮುನ್ನಡೆಯಲು ಹಂಬಲಿಸುತ್ತಿರುವ ಮಹಿಳೆಯರನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಂಡು ಮೀನುಗಾರಿಕೆ ಇಲಾಖೆ ಮತ್ತು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಕಾರ ಪಡೆದು ಒಕ್ಕೂಟದ ಸಮುದಾಯ ಸುತ್ತುನಿಧಿಯ ನೆರವಿನೊಂದಿಗೆ ಮತ್ಸ್ಯವಾಹಿನಿಯಲ್ಲಿ ಶುಚಿ-ರುಚಿಯಾದ ಮೀನಿನ ಖಾದ್ಯಗಳನ್ನು ಸಾರ್ವಜನಿಕರಿಗೆ ಉಣಬಡಿಸುವುದಕ್ಕೆ ಅಣಿಗೊಳಿಸಲಾಗುತ್ತಿದೆ.

ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್.ನಂದಿನಿ ಅವರ ನಾಯಕತ್ವದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಎನ್‌ಆರ್‌ಎಲ್‌ಎಂ ನೋಡಲ್ ಅಧಿಕಾರಿ ಪಿ.ಲಕ್ಷ್ಮೀ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಎಚ್.ಬಾಬಾಸಾಬ್ ಅವರನ್ನೊಳಗೊಂಡ ತಂಡ ಮೀನುಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಅನ್ಬುಕುಮಾರ್ ಅವರನ್ನು ಭೇಟಿಯಾಗಿ ಜಿಲ್ಲೆಗೆ ನಿಗದಿಯಾಗಿದ್ದ ೩ ಮತ್ಸ್ಯವಾಹಿನಿ ವಾಹನಗಳ ಜೊತೆಗೆ ಹೆಚ್ಚುವರಿಯಾಗಿ ೧೧ ವಾಹನಗಳನ್ನು ಮಹಿಳೆಯರ ಬಲವರ್ಧನೆಗೆ ಒದಗಿಸುವಂತೆ ಕೋರಿ ಮಂಜೂರು ಮಾಡಿಸಿರುವುದು ಹೆಗ್ಗಳಿಕೆ ಸಂಗತಿಯಾಗಿದೆ.

ಒಟ್ಟು ೨೫ ಮೀನಿನ ಕ್ಯಾಂಟೀನ್‌ಗಳಿಂದ ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿ ಉದ್ದಿಮೆಯನ್ನು ಸ್ಥಾಪಿಸಿ ಆ ಮೂಲಕ ಕುಟುಂಬದ ಜೀವನಮಟ್ಟವನ್ನು ಸುಧಾರಿಸುವುದು. ಯಶಸ್ವಿ ಸಣ್ಣ ಉದ್ದಿಮೆದಾರರಾಗಿ ಮಹಿಳೆಯರನ್ನು ರೂಪಿಸುವ ಗುರಿಯನ್ನು ಹೊಂದಲಾಗಿದೆ.

ಮಹಿಳೆಯರಿಗೆ ಕ್ಯಾಂಟೀನ್ ನಡೆಸಲು ಬೇಕಾದ ತಾಂತ್ರಿಕ ತರಬೇತಿಯನ್ನು ಆರ್- ಸೇಟಿ ವತಿಯಿಂದ ನೀಡಲಾಗುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಶುಚಿ- ರುಚಿಯಾದ ಮೀನಿನ ಖಾದ್ಯ ತಯಾರಿಸುವ, ಆರ್ಥಿಕ ಸಾಕ್ಷರತೆ ಬಗ್ಗೆಯೂ ತಿಳಿವಳಿಕೆ ಮೂಡಿಸಲಾಗುವುದು. ಜಿಲ್ಲಾ ಪಂಚಾಯತ್ ಮಾದರಿಯಾಗಿ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಸಮವಸ್ತ್ರವನ್ನು ಸಿದ್ಧಪಡಿಸಿಕೊಟ್ಟಿದೆ. ಶಿಸ್ತಿನ ಸಿಪಾಯಿಗಳಂತೆ ಮಹಿಳೆಯರು ಹೊಸ ಉದ್ಯಮ ಪ್ರಾರಂಭಿಸುವುದಕ್ಕೆ ಜಿಲ್ಲಾ ಪಂಚಾಯತ್ ನೆರವಾಗಿದೆ.

--------------------------

ಸಮುದ್ರ ಮೀನಿನ ಖಾದ್ಯಗಳ ಪರಿಚಯ

ಜಿಲ್ಲೆಯೊಳಗೆ ಮೀನೂಟಕ್ಕೆ ಹೆಚ್ಚಿನ ಮಹತ್ವ ದೊರಕಿಲ್ಲ. ಮೀನೂಟ ಎಂದರೆ ಮುಳ್ಳಿಗೆ ಹೆದರುವವರೇ ಹೆಚ್ಚು. ಪೋಷಕಾಂಶಗಳ ಭಂಡಾರವನ್ನೇ ಹೊಂದಿರುವ ಮೀನಿನ ಖಾದ್ಯ ಆರೋಗ್ಯದಾಯಕ ಆಹಾರವಾಗಿದೆ. ಸಾಮಾನ್ಯವಾಗಿ ಜಿಲ್ಲೆಯೊಳಗೆ ಮೀನು ಸೇವಿಸುವವರಲ್ಲಿ ಕೆರೆ ಮೀನುಗಳ ಸವಿಯನ್ನು ಸವಿದಿದ್ದಾರೆಯೇ ವಿನಃ ಸಮುದ್ರ ಮೀನುಗಳ ಖಾದ್ಯವನ್ನು ಸವಿದಿರುವವರು ಅಪರೂಪ. ಸಮುದ್ರದ ಮೀನಿನ ಖಾದ್ಯದ ಬೆಲೆ ಹೆಚ್ಚು ಎಂಬ ಕಾರಣಕ್ಕೆ ಅದನ್ನು ಸೇವಿಸದವರೂ ಇದ್ದಾರೆ. ಕೆರೆ ಮೀನಿನ ರುಚಿಯ ಜೊತೆಗೆ ಸುಲಭ ದರದಲ್ಲಿ ಸಮುದ್ರ ಮೀನುಗಳ ಖಾದ್ಯವನ್ನು ತಯಾರಿಸಿ ನೀಡುವುದಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಈ ಸಮುದ್ರ ಮೀನುಗಳನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಕ್ಯಾಂಟೀನ್ ನಡೆಸುವವರಿಗೆ ಒದಗಿಸಲಿದೆ.

-------------------------------

ಸ್ವಾವಲಂಬಿ ಜೀವನ ನಡೆಸುವ ಹಂಬಲ ಹೊಂದಿರುವ ಮಹಿಳೆಯರು ಈ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಗುಣಮಟ್ಟದ ಶುಚಿ- ರುಚಿಯಾದ ಮೀನೂಟ ತಯಾರಿಸಿ ನೀಡಿದರೆ ಗ್ರಾಹಕರು ಆಕರ್ಷಿತರಾಗುವರು. ಉದ್ಯಮವೂ ಬೆಳವಣಿಗೆ ಕಾಣುವುದು. ಗ್ರಾಮೀಣ ಮಹಿಳೆಯರು ೧೧ ಸಂಚಾರಿ ಕ್ಯಾಂಟೀನ್‌ಗಳು ಹಾಗೂ ೧೫ ಸಣ್ಣ ಕ್ಯಾಂಟೀನ್ ನೇತೃತ್ವ ವಹಿಸಿ ಉದ್ಯಮ ಆರಂಭಿಸಿ ಆರ್ಥಿಕ ಪ್ರಗತಿ ಸಾಧಿಸಬೇಕೆಂಬುದು ಯೋಜನೆಯ ಮುಖ್ಯ ಗುರಿಯಾಗಿದೆ.

- ಕೆ.ಆರ್.ನಂದಿನಿ, ಸಿಇಒ, ಜಿಲ್ಲಾ ಪಂಚಾಯತ್