ಸಾರಾಂಶ
ಅಕ್ಕಮಹಾದೇವಿ ಜಯಂತಿಗೆ ತೆರೆದ ಮುರುಘಾಮಠ । ಡಾ.ಬಸವಕುಮಾರ ಶ್ರೀ ಸಾನಿಧ್ಯ । ಅಕ್ಕನ ವಚನ ಗಾಯನ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಹನ್ನೆರಡನೇ ಶತಮಾನದ ಬಸವಾದಿ ಶರಣರ ಜಯಂತಿ ಆಚರಣೆಗೆ ಮುಕ್ತ ವಾತಾವರಣ ಕಲ್ಪಿಸಿ ಮುನ್ನಡೆಯುತ್ತಿರುವ ಬಸವಕೇಂದ್ರ ಮುರುಘಾಮಠದಲ್ಲಿ ಶನಿವಾರ ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಸ್ಮರಣೆ ಕಲರವ. ಮುರುಗಿ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಬೆಳ್ಳಂ ಬೆಳಗ್ಗೆಯೇ ಅಕ್ಕನ ವಚನ ಗಾಯನ ನಿನಾದ ತೇಲಿ ಬಂತು.
ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಅಕ್ಕಮಹಾದೇವಿಯವರನ್ನು ಅಧ್ಯಯನ ಮಾಡಿದರೆ ಪ್ರಕೃತಿಯೊಂದಿಗಿನ ಸಾಂಗತ್ಯ ಅನಾವರಣಗೊಳ್ಳುತ್ತದೆ. ಅಕ್ಕನ ಜೀವನ ಪ್ರಕೃತಿ ಧರ್ಮ ಪಾಲನೆ ಆಗಿತ್ತು. ಪ್ರಕೃತಿಯೊಂದಿಗೆ ನಾವು ನಡೆದರೆ ನಮ್ಮ ಜೀವನ ಸುಗಮ ಎಂದರು.ಅಕ್ಕಮಹಾದೇವಿಯವರ ವಚನವೆಂದರೆ ಅದು ಪ್ರಕೃತಿಯಿದ್ದಂತೆ. ಅಕ್ಕ ಜನರೊಂದಿಗೆ ಹೆಚ್ಚು ಮಾತನಾಡದೆ ಪ್ರಕೃತಿಯೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದರು ಎಂಬುದು ಅವರ ವಚನಗಳಿಂದ ತಿಳಿಯುತ್ತದೆ. ಕಲ್ಯಾಣದಿಂದ ಕದಳೀವನದವರೆಗೆ ಅವರು ಪ್ರಾಣಿ-ಪಕ್ಷಿಗಳೊಂದಿಗೆ ಸಂವಹನ ನಡೆಸುತ್ತ ತಮ್ಮ ಪ್ರಯಾಣ ನಡೆಸುತ್ತಾರೆ. ದ್ವೇಷ, ಮದ ಮತ್ಸರಗಳನ್ನು ಗೆಲ್ಲುವುದು ಕಷ್ಟ. ಆಕ್ಕಮಹಾದೇವಿ ಇವೆಲ್ಲವನ್ನು ಗೆದ್ದಿದ್ದರು ಎಂದರು.
ಜೈನ ಧರ್ಮ ಶ್ರೇಷ್ಠ ಧರ್ಮ. ಜೈನಮುನಿಗಳು ತಮ್ಮ ಸಂಕಲ್ಪದಲ್ಲೂ ಸಕಲ ಜೀವಿಗಳಿಗೆ ಹಿಂಸೆಯಾಗಬಾರದೆಂದು ಆಶಿಸಿದ್ದರು. ಕನ್ನಡ ಸಾಹಿತ್ಯ ಹುಟ್ಟಿದ್ದು ಜೈನಧರ್ಮದಿಂದ. ನಂತರದಲ್ಲಿ 12 ನೇ ಶತಮಾನದಲ್ಲಿ ವಚನ ಸಾಹಿತ್ಯ ರಚಿತವಾಯಿತು. ಅಕ್ಕಮಹಾದೇವಿ 134 ವಚನ ರಚಿಸಿದ್ದಾರೆ ಎಂದರು.ಉಸಿರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ? ಎಂದು ಅಕ್ಕಮಹಾದೇವಿ ತಮ್ಮ ವಚನದಲ್ಲಿ ಹೇಳುತ್ತಾರೆ. ನಮ್ಮ ದೇಹ, ಭಾವ, ಅಂತರಂಗ ಶುಚಿಯಾಗಿದ್ದರೆ ನಮ್ಮ ಉಸಿರು ಪರಿಮಳವಾಗಿರುತ್ತದೆ. ಆಗ ಕುಸುಮದ ಪರಿಮಳದ ಹಂಗಿರುವುದಿಲ್ಲ ಎನ್ನುತ್ತಾರೆ. ನಮ್ಮ ವರ್ತನೆ ನಮ್ಮ ನಾಲಿಗೆಯಿಂದಷ್ಟೇ ಅಲ್ಲ, ನಮ್ಮ ನಡೆಯಿಂದ ತಿಳಿಯುತ್ತದೆ. 770 ಅಮರಗಣಂಗಳಿದ್ದಾರೆ ಎಂದು ತಿಳಿಸಿದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ವೈರಾಗ್ಯನಿಧಿ. ಕನ್ನಡದ ಪ್ರಥಮ ಕವಯತ್ರಿ. ಅವರ ವಚನಗಳು ಮಹಿಳೆಯರಿಗೆ ಪ್ರೇರಣೆ ಎಂದರು.ಅಕ್ಕಮಹಾದೇವಿ ಕಲ್ಯಾಣದಿಂದ ಚೆನ್ನಮಲ್ಲಿಕಾರ್ಜುನರನ್ನು ಅರಸುತ್ತ ಶ್ರೀಶೈಲದೆಡೆಗೆ ಬಂದು ಕದಳೀವನದಲ್ಲಿ ಐಕ್ಯವಾದ ಎಲ್ಲಾ ವೃತ್ತಾಂತವನ್ನು ಶ್ರೀಗಳು ಎಳೆಎಳೆಯಾಗಿ ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಶ್ರೀಮಠದಲ್ಲಿ ಬಸವಾದಿ ಶರಣರ ಜಯಂತಿಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಉಡುತಡಿಯಲ್ಲಿ ಅಕ್ಕಮಹಾದೇವಿಯ ಬದುಕನ್ನು ಬಿಂಬಿಸಲಾಗಿದೆ. ಅವರ ವಚನಗಳು ಇಂದಿಗೂ ಅನುಕರಣೀಯ ಎಂದು ತಿಳಿಸಿದರು.ಸಾದರಹಳ್ಳಿ ಸಿದ್ಧಲಿಂಗ ಶ್ರೀ, ಎನ್.ಆರ್.ಪುರ ಬಸವಕೇಂದ್ರದ ಪುಟ್ಟಸ್ವಾಮಿ, ಸಾಹಿತಿ ಆನಂದಕುಮಾರ್, ಜಾಗತಿಕ ಲಿಂಗಾಯಿತ ವೇದಿಕೆಯ ಸದಸ್ಯ ಬಸವರಾಜ ಕಟ್ಟಿ, ಕದಳೀ ವೇದಿಕೆಯ ವಿಜಯಲಕ್ಷ್ಮಿ, ಜಗದ್ಗುರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭರತ್ ಪಿ.ಬಿ., ವಿವಿಧ ಇಲಾಖಾ ಮುಖ್ಯಸ್ಥರಾದ ಡಾ.ಕುಮಾರಸ್ವಾಮಿ ಬಿ.ಜಿ., ಡಾ.ಸಿದ್ಧೇಶ್ ಕೆ.ಬಿ., ಡಾ.ಕೃಷ್ಣಾರೆಡ್ಡಿ ಕೆ.ಆರ್., ಡಾ.ಲೋಕೇಶ್ ಎಚ್.ಜೆ, ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ಅಕ್ಕಮಹಾದೇವಿಯವರ ವಚನ ಗಾಯನ ಮಾಡಿದರು. ಪ್ರೊ.ಜಯದೇವಪ್ಪ ಆರ್.ಎಸ್ ನಿರೂಪಿಸಿದರು.