ಕನ್ನಡ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಅಪಾರ

| Published : Apr 13 2025, 02:12 AM IST

ಸಾರಾಂಶ

೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಕನ್ನಡ ಸಾಹಿತ್ಯಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದು ಅವರ ವಚನ ಸಾಹಿತ್ಯದಲ್ಲಿ ಜನಪರ ಮತ್ತು ಸಾಮಾಜಿಕ ಚಿಂತನೆಗಳು ಅಡಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಕನ್ನಡ ಸಾಹಿತ್ಯಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದು ಅವರ ವಚನ ಸಾಹಿತ್ಯದಲ್ಲಿ ಜನಪರ ಮತ್ತು ಸಾಮಾಜಿಕ ಚಿಂತನೆಗಳು ಅಡಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು. ಪಟ್ಟಣದ ಲಯನ್ಸ್ ಭವನದ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಕಮಹಾದೇವಿಯ ತಮ್ಮ ವಚನಗಳಲ್ಲಿ ವೈಚಾರಿಕತೆ, ಮೂಢನಂಬಿಕೆಯಂತಹ ಅನಿಷ್ಟಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ, ಕಲ್ಯಾಣ ಪಟ್ಟಣದ ಅನುಭವ ಮಂಟಪಕ್ಕೆ ಅಕ್ಕಮಹಾದೇವಿ ಬಂದ ಸಂದರ್ಭದಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ನಡುವಿನ ಸಂಭಾಷಣೆ ಮನುಕುಲಕ್ಕೆ ಮಾದರಿಯಾಗಿದೆ. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ, ಬಸವಣ್ಣನವರು ಮತ್ತು ಸೇರಿದಂತೆ ಹತ್ತಾರು ಸಮಾರಂಭಗಳನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಶಾಲಾ-ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಶರಣ ಸಾಹಿತ್ಯ ಪರಿಷತ್ತು ಒಂದು ಜಾತಿ,ಧರ್ಮಕ್ಕೆ ಸೀಮಿತವಾಗಿಲ್ಲ, ಸರ್ವರೂ ಕೂಡ ಸದಸ್ಯತ್ವ ಪಡೆಯಬೇಕು ಎಂದರು.ಶಿಕ್ಷಕಿ ಮತ್ತು ಸಾಹಿತಿ ಮಧುಮಾಲತಿ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೆಣ್ಣಿನ ಪರವಾಗಿ ಮೊದಲು ಧ್ವನಿ ಎತ್ತಿದ ಅಕ್ಕಮಹಾದೇವಿ ಸ್ತ್ರೀಪರ ನಡೆದ ಬಂಡಾಯ ಹೋರಾಟದ ಪ್ರಮುಖರು. ಅವರ ಪ್ರತಿಯೊಂದು ವಚನ ಸಾಹಿತ್ಯ ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಕೈದೀವಿಗಳಾಗಿವೆ. ಚನ್ನಮಲ್ಲಿಕಾರ್ಜನ ಎಂಬ ಅಂಕಿನಾಮದಿಂದ ಆತ್ಮ ಪರಮಾತ್ಮ ಸಂಸಾರ, ಬಂಧನ, ಬಿಡುಗಡೆ ಮುಂತಾದವುಗಳ ಪರಿಮಿತಿಯಲ್ಲಿ ಪರಿಭ್ರಮಿಸುವ ಅಕ್ಕನ ಹೋರಾಟ ಇಡೀ ಜಗತ್ತಿನ ಮಾದರಿಯಾಗಿದೆ ಎಂದರು. ಅರೇಹಳ್ಳಿ ಗೀತಾಶಿವರಾಜ್ ಅವರ ಸಾಧನೆ ಅಮೋಘ ಸಮಾಜ ಸೇವೆಯನ್ನು ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಜಾನಪರ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ತಾ, ಘಟಕದ ಅಧ್ಯಕ್ಷ ಎ.ಎಸ್.ಬಸವರಾಜು, ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ ಇದ್ದರು.