ಮಹಿಳೆಯರ ಸ್ವಾಭಿಮಾನದ ಶಕ್ತಿ ಎತ್ತಿಹಿಡಿದ ಅಕ್ಕಮಹಾದೇವಿ: ಶಿವಬಸಪ್ಪ ಮುದ್ದಿ

| Published : May 16 2024, 12:53 AM IST

ಮಹಿಳೆಯರ ಸ್ವಾಭಿಮಾನದ ಶಕ್ತಿ ಎತ್ತಿಹಿಡಿದ ಅಕ್ಕಮಹಾದೇವಿ: ಶಿವಬಸಪ್ಪ ಮುದ್ದಿ
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಎರಡು ದಶಕಗಳ ಕಾಲ ವಚನ ಚಿಂತನೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಆರೋಗ್ಯಕರ ಲಕ್ಷಣ. ವಚನ ಸಾಹಿತ್ಯ ಪುಸ್ತಕ್ಕದ್ದಲ್ಲ, ಬದುಕಿಗೆ ದಾರಿ ದೀಪ ನೀಡುವಂತಹವು ಬಸವ ಸಮಿತಿಯ ಶಿವಬಸಪ್ಪ ಮುದ್ದಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಅನುಭವವನ್ನು ಅನುಭಾವವಾಗಿಸಿ ಜೀವ ಜಗತ್ತಿಗೆ ಸಾತ್ವಿಕ ಬದುಕಿನ ಸಂದೇಶ ನೀಡಿದ ಅಕ್ಕಮಹಾದೇವಿ ಮಹಿಳೆಯರ ಸ್ವಾಭಿಮಾನದ ಶಕ್ತಿ ಎತ್ತಿ ಹಿಡಿದವಳು. ಸ್ತುತಿ ನಿಂದನೆಗಳು ಬಂದರೂ ಸಮಾಧಾನಿಯಾಗಿ ಮುನ್ನುಗ್ಗಬೇಕೆಂದು ಆತ್ಮಸ್ಥೈರ್ಯ ನೀಡಿದವಳು ಅಕ್ಕ ಎಂದು ಬಸವ ಸಮಿತಿಯ ಶಿವಬಸಪ್ಪ ಮುದ್ದಿ ನುಡಿದರು.

ಇಲ್ಲಿಯ ಹಾನಗಲ್ಲ ರಸ್ತೆಯ ಗ್ರಾಮೀಣ ಪೊಲೀಸ್‌ ಠಾಣೆ ಆವರಣದಲ್ಲಿರುವ ರವಿ ಸಾರಂಗಮಠ ಸ್ವಗೃಹದಲ್ಲಿ ನಡೆದ ೩೮೩ನೇ ವಚನ ಚಿಂತನ ಮಂಥನ ವಿಚಾರ ಸರಣಿ ಉದ್ಘಾಟಿಸಿ ಮಾತನಾಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ವೇದಿಕೆ, ಬಾಳಜ್ಯೋತಿ ನಗರ ಮತ್ತು ಗ್ರಾಮೀಣ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ನಡೆದ ಸಂಕಿರಣದ ಅಧ್ಯಕ್ಷತೆಯನ್ನು ದಾಕ್ಷಾಯಿಣಿ ಗಾಣಗೇರ ವಹಿಸಿ, ಸತತ ಎರಡು ದಶಕಗಳ ಕಾಲ ವಚನ ಚಿಂತನೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಆರೋಗ್ಯಕರ ಲಕ್ಷಣ. ವಚನ ಸಾಹಿತ್ಯ ಪುಸ್ತಕ್ಕದ್ದಲ್ಲ, ಬದುಕಿಗೆ ದಾರಿ ದೀಪ ನೀಡುವಂತಹವು ಎಂದು ಹೇಳಿದರು.

ಅನಿತಾ ಮಂಜುನಾಥ ಮಾತನಾಡಿ, ವಚನ ಪರಂಪರೆಯನ್ನು ಬರಿ ೧೨ನೇ ಶತಮನಾಕ್ಕೆ ಸೀಮಿತವಾಗಿ ಅಧ್ಯಯನ ಮಾಡುವುದಕ್ಕಿಂತ, ಇಂದಿನ ಅನೇಕ ಸಮಸ್ಯೆಗಳಿಗೆ ಅದು ನೀಡುವ ಉತ್ತರಗಳನ್ನು ಹುಡಕಬೇಕಾಗಿದೆ ಎಂದರು.

ಬಸವ ಸಮಿತಿಯ ಯುವ ಚಿಂತಕ ಜಗದೀಶ ಹತ್ತಿಕೋಟೆ, ಶರಣರ ಯಾವುದೇ ವಚನವನ್ನು ತೆಗೆದುಕೊಂಡರೂ ಅದು ಆತ್ಮವಿಶ್ವಾಸವನ್ನು ತುಂಬಿ ಮುನ್ನಡೆಸುವ ಶಕ್ತಿಯದ್ದಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಲಲಿತಮ್ಮಾ ಹೊರಡಿ, ೨೦ ವರ್ಷಗಳಿಂದ ಕದಳಿ ವೇದಿಕೆ ಸತತ ೩೮೩ ವಚನ ಚಿಂತನ ಮಂಥನಗಳನ್ನು ನಡೆಸಿದ್ದು, ಬಾಲರು ಪ್ರಬುದ್ಧರಾಗಿ, ಪ್ರಬುದ್ಧರು ವಚನ ಪರಂಪರೆಯ ಸಾಧಕರಾಗಿದ್ದಾರೆಂದರು.

ಸರ್ವಶ್ರೀ ಮುರಿಗೆಪ್ಪ ಹಳಕೊಪ್ಪ, ಚೆನ್ನಬಸವಣ್ಣ ರೊಡ್ಡನವರ, ಎಸ್.ಆರ್. ಹಿರೇಮಠ, ಚಂದ್ರಶೇಖರ ಮಾಳಗಿ, ಅಮೃತಕ್ಕ ಶೀಲವಂತರ, ಲೀಲಾವತಿ ಪಾಟೀಲ, ಅನಿತಾ ಉಪಾಸಿ, ಶೈಲಜಾ ಕೋರಿಶೆಟ್ಟರ, ಅಂಜಲಿ ಯಾದಗಿರಿ, ಜ್ಯೋತಿ ಬಶೆಟ್ಟಿಯವರ, ಸುನೀತಾ ಪಿ, ಕಾರ್ತಿಕ ಸಾರಂಗಮಠ ಮುಂತಾದವರು ಭಾಗವಹಿಸಿದ್ದರು.

ಸ್ನೇಹಾ ಉಮೇಶ ತಳವಾರ ವಚನ ಹಾಡಿದರು. ರಚನಾ ಉಮೇಶ ಮಲ್ಲಾಪೂರ ಮತ್ತು ಆರಾಧ್ಯ ಗೌರಮ್ಮನವರ ಅಕ್ಕಮಹಾದೇವಿ ಮತ್ತು ಬಸವಣ್ಣನವರ ವೇಷಭೂಷಣದಲ್ಲಿ ಗಮನ ಸೆಳೆದರು. ರಾಜೇಶ್ವರಿ ಸಾರಂಗಮಠ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ನಿರೂಪಿಸಿದರು. ರವಿ ಸಾರಂಗಮಠ ವಂದಿಸಿದರು.