ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿವಿಧ ಭೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಬೆಂಬಲಿತ) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಸದ ಡಾ.ಕೆ.ಸುಧಾಕರ್ ಗೆ ಮನವಿ ಸಲ್ಲಿಸಿದೆ.ಈ ಕುರಿತು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ ದೇಶದಲ್ಲಿ ಸುಮಾರು 26 ಲಕ್ಷ ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ (ಅಡುಗೆಯ ಸಹಾಯಕರು) ಕೆಲಸ ಮಾಡುತ್ತಿದ್ದು, ಅವರಲ್ಲಿ ಶೇ. 98 ಮಹಿಳೆಯರಿದ್ದಾರೆ ಎಂದರು.
ಕಾರ್ಮಿಕರೆಂದು ಪರಿಗಣಿಸಿಲ್ಲಇವರೆಲ್ಲರೂ ದಿನಕ್ಕೆ ಸುಮಾರು 6-8 ಗಂಟೆಗಳ ಕಾಲ ಕೆಲಸ ಮಾಡುವ ಇವರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ ಮತ್ತು ಕನಿಷ್ಠ ವೇತನವನ್ನು ಸಹ ನೀಡುತ್ತಿಲ್ಲ. ಅವರು ಯಾವುದೇ ಮೂಲಭೂತ ಸೌಲಭ್ಯವಾಗಲಿ, ಸಾಮಾಜಿಕ ಭದ್ರತೆ ಪ್ರಯೋಜನಗಳಾಗಲಿ ಪಡೆಯುತ್ತಿಲ್ಲ. ಮತ್ತು ವರ್ಷದಲ್ಲಿ ಕೇವಲ ಹತ್ತು ತಿಂಗಳು ಮಾತ್ರ ಕೆಲಸಕ್ಕೆ ಗೌರವಧನ ಪಡೆಯುತ್ತಿದ್ದಾರೆ. ತಿಂಗಳಿಗೆ ಕೇವಲ 1000 ರು.ಗಳ ವೇತನ ನೀಡುತ್ತಿರುವುದು ದೇಶದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವೇತನ ಸಹ ಪ್ರತಿ ತಿಂಗಳು ಸರಿಯಾಗಿ ನೀಡುತ್ತಿಲ್ಲ ಎಂದರು.
ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ವೇತನ ಹೆಚ್ಚಳ ಅನುಷ್ಠಾನವನ್ನು ಜಾರಿಗೊಳಿಸಲು ಮತ್ತು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದರು.ನೌಕರರ ಸಂಘದ ಬೇಡಿಕೆಗಳು
ಬಿಸಿಯೂಟ ನೌಕರರ ವೇತನವನ್ನು ತಕ್ಷಣವೇ ಹೆಚ್ಚಿಸಬೇಕು. ಸ್ಕಿಮ್ ವರ್ಕರ್ ಗಳಿಗೆ ಸಂಬಂಧಿಸಿದಂತೆ 45ನೇ ಮತ್ತು 46ನೇ ಐಎಲ್ ಸಿ ಯ ಶಿಫಾರಸುಗಳನ್ನು ಜಾರಿಗೊಳಿಸಿ, ಕಾರ್ಮಿಕರೆಂದು ಪರಿಗಣಿಸಬೇಕು. ಬಿಸಿಯೂಟ ನೌಕರರಿಗೆ ವರ್ಷದ 12 ತಿಂಗಳು ಕೆಲಸ ತಿಂಗಳಿಗೆ ರೂ.26,000 ಕಡಿಮೆಯಿಲ್ಲದೆ ಕನಿಷ್ಠ ವೇತನವನ್ನು ಪಾವತಿಸಬೇಕು. ತಿಂಗಳಿಗೆ ಪಿಂಚಣಿ ರೂ.10000, ಗ್ರಾಚ್ಯುಟಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು, ಇಎಸ್‌ಐ ಸೇರಿದಂತೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸಿ, "ಡಿ " ಗ್ರೂಪ್ ನೌಕರರಾಗಿ ಗುರುತಿಸಬೇಕು. ಹಾಜರಾತಿ ಆಧಾರದಲ್ಲಿ ಯಾವುದೇ ನೌಕರರನ್ನು ಕೆಲಸದಿಂದ ಕೈಬಿಡಬಾರದು. ಎಲ್ಲಾ ಬಿಸಿಯೂಟ ನೌಕರರಿಗೆ ನೇಮಕಾತಿ ಪತ್ರಗಳು ಮತ್ತು ಗುರುತಿನ ಚೀಟಿಗಳನ್ನು ನೀಡಿ ದೇಶದಾದ್ಯಂತ ಒಂದೇ ರೀತಿಯ ಸೇವಾ ಷರತ್ತುಗಳನ್ನು ಮಾಡಿ ಮತ್ತು ಕಾರ್ಯಗತಗೊಳಿಸಿ, ಏಪ್ರಿಲ್ ಮತ್ತು ಮೇ ತಿಂಗಳ ಕೆಲಸಕ್ಕೆ ಕೇಂದ್ರ ಪಾಲು ತಕ್ಷಣ ಬಿಡುಗಡೆ ಮಾಡಬೇಕು. ಎಲ್ಲಾ ಎಂಡಿಎಂ ಕಾರ್ಯಕರ್ತರಿಗೆ ಹಬ್ಬದ ವಿಶೇಷ ದಿನಗಳ ಭತ್ಯೆ ನೀಡಬೇಕು.ಆಹಾರ ಭದ್ರತಾ ಕಾಯಿದೆಯಲ್ಲಿ 12 ನೇ ತರಗತಿಯವರೆಗಿನ ಮಕ್ಕಳನ್ನು ಸೇರಿಸಿ ಮತ್ತು ಅದರ ಪ್ರಕಾರ ಎಲ್ಲಾ ಶಾಲೆಗಳನ್ನು ಒಳಗೊಂಡಂತೆ ಮಧ್ಯಾಹ್ನದ ಊಟ ಯೋಜನೆಯನ್ನು ವಿಸ್ತರಿಸಿ, ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಮಧ್ಯಾಹ್ನದ ಬಿಸಿಯೂಟ ನೌಕರರನ್ನು ನೇಮಕಮಾಡಬೇಕು ಎಂಬುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಸದ ಡಾ.ಕೆ.ಸುಧಾಕರ್ ರವರಿಗೆ ಅವರ ಗೃಹ ಕಚೇರಿಯಲ್ಲಿ ಅವರ ಆಪ್ತ ಸಹಾಯಕ ಎಂ.ಪ್ರಭಾಕರ್ ಮತ್ತು ಮುಖ್ಯಮಂತ್ರಿಯವರಿಗೆ ಜಿಪಂ ಉಪ ಕಾರ್ಯದರ್ಶಿ ಅಥೀಕ್ ಪಾಷ ರ ಮುಖಾಂತರ ಮನವಿಯನ್ನು ಸಲ್ಲಿಸಿರುವುದಾಗಿ ತಿಳಿಸಿದರು
ಈ ವೇಳೆ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುಸ್ತಾಫಾ, ಕೆ.ಆರ್.ಮಂಜುಳ, ರಾಜಮ್ಮ,ಅಮರಾವತಿ,ಸುಜಾತ, ವೆಂಕಟಲಕ್ಷ್ಮೀ ಮತ್ತಿತರರು ಇತರರು ಇದ್ದರು.