ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾ ಪಂಚಾಯತ್ ಆವರಣಕ್ಕೆ ಬಂತು. ಇದೇ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾಗಿ ೨೪ ವರ್ಷಗಳು ಕಳೆಯುತ್ತಿದೆ. ಲಕ್ಷಾಂತರ ಮಕ್ಕಳಿಗೆ ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಬಿಸಿ ಬಿಸಿ ಆಹಾರ ನೀಡಿ, ಶಾಲೆಯಲ್ಲಿ ನೀಡುವ ದಿನನಿತ್ಯದ ಎಲ್ಲಾ ಕೆಲಸ ಮಾಡಿ, ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ತಾಯ್ತತನದ ಪ್ರೀತಿ ನೀಡುವ ಪರಿಶ್ರಮ ಸಾಗಿದೆ. ಪ್ರತಿಯೊಂದು ಮಗುವು ಶಿಕ್ಷಣ ಕಲಿಯಬೇಕೆಂಬ ಮಹತ್ವದ ಉದ್ದೇಶದಿಂದ ೧೯೬೮ರಲ್ಲಿ ಮೊದಲ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಇದರ ಕರ್ತವ್ಯದ ಭಾಗವಾಗಿ ಬಿಸಿಯೂಟ ನೀಡುವ ಮೂಲಕ ಜಾರಿಯಲ್ಲಿದೆ. ದೇಶದ ಅಭಿವೃದ್ಧಿಗೆ ಪೂರಕವಾದ ಮಕ್ಕಳ ಅಪೌಷ್ಟಿಕತೆಯಿಂದ ಹೋಗಲಾಡಿಸಿ, ಏಕಾಗ್ರತೆಯಿಂದ ಶಿಕ್ಷಣ ಪಡೆಯಲು, ಅರ್ಧದಲ್ಲಿ ಶಾಲೆಯನ್ನು ಬಿಡುವ ಕ್ರಮ ನಿಲ್ಲಿಸಲು ಮಧ್ಯಾಹ್ನದ ಉಪಾಹಾರ ಯೋಜನೆಯನ್ನು ಅಂದಿನಿಂದ ಇಂದಿನವರೆಗೆ ಸಮಗ್ರವಾಗಿ ನಡೆಸಿಕೊಂಡು ಬಂದಿದೆ ಎಂದರು.
ಈ ಯೋಜನೆ ದೇಶದ ಮಹತ್ವದ ಯೊಜನೆಯಾಗಿ ದೇಶದಾದ್ಯಂತ ಮುಂದುವರಿದಿದೆ. ಈ ಯೋಜನೆಯ ಮಹತ್ವವನ್ನು ಅರಿತು ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದಲ್ಲಿ ಹೈಕೋರ್ಟ್ ವರ್ಷದ ೧೨ ತಿಂಗಳು ಕೆಲಸ ಹಾಗೂ ಕನಿಷ್ಟ ಕೂಲಿ ನೀಡಲು ಆದೇಶಿಸಿದೆ. ೨೦೧೪ರ ನಂತರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆ ಬದಲಾಗಿ ನೀತಿ ಆಯೋಗದ ಶಿಪಾರಸ್ಸುಗಳಂತೆ ೬೦:೪೦ರ ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿಯಿಂದ ನುಣುಚಿಕೊಂಡು ಬಜೆಟ್‌ನಲ್ಲಿ ಅನುದಾನಗಳನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಬಿಸಿಯೂಟ ಯೋಜನೆ ಕೊಡಲಾದ ಸಾದಿಲ್ವಾರು ವೆಚ್ಚ, ಅಡುಗೆ ಗುಣಮಟ್ಟದ ವೆಚ್ಚ, ೨೦೧೪ರಿಂದಲೂ ಹೆಚ್ಚಳ ಮಾಡದೇ ಅನುದಾನದಲ್ಲಿ ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಿದೆ. ಮಾತ್ರವಲ್ಲದೇ ಈ ಯೋಜನೆಯ ಹೆಸರನ್ನು ಬದಲಾಯಿಸಿದೆ. ತನ್ನ ಪಾಲಿನ ನಿಧಿಯನ್ನು ಕಡಿತಗೊಳಿಸಿ ರಾಜ್ಯದ ಪಾಲನ್ನು ಕೊಡಬೇಕು ಎಂಬ ನೀತಿಯನ್ನು ಅನುಸರಿಸಿದ್ದರಿಂದ ಯೋಜನೆಯನ್ನು ಬಲಿಷ್ಠ ಪಡಿಸುವ ಜವಾಬ್ದಾರಿ ನನ್ನದಷ್ಟೇ ಅಲ್ಲ ಎಂದು ಹೇಳುತ್ತಿದೆ. ಕಳೆದ ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಿದ ಬಿಸಿಯೂಟ ನೌಕರರಿಗೆ ಇಡಿಗಂಟು ಜಾರಿ ಮಾಡಲು ನಮ್ಮ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಸೇವೆಯ ಆಧಾರಿತವಾಗಿ ನೀಡಲು ಶಿಫಾರಸು ಮಾಡಿದೆ. ಆದರೆ ಇದುವರೆಗೆ ಜಾರಿ ಆಗಿರುವುದಿಲ್ಲ. ತಕ್ಷಣ ಇದನ್ನು ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಬಿಸಿಯೂಟ ಯೋಜನೆಗಳನ್ನು ಬಲಹೀನಗೊಳಿಸಲು ಇಸ್ಕಾನ್ ಹಾಗೂ ಧರ್ಮಾದಾರಿತ ಕೆಲ ಸಂಘ-ಸಂಸ್ಥೆಗಳಿಗೆ ಈ ಯೋಜನೆ ನಿಡಲು ಕೆಲ ಜಿಲ್ಲೆಗಳಲ್ಲಿ ಆಗಾಗ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಶಾಲೆಗಳಲ್ಲಿ ಕೆಲಸ ಮಾಡುವ ಬಿಸಿಯೂಟ ನೌಕರರು ಭೀತಿಯಲ್ಲಿಯೇ ಕೆಲಸ ಮಾಡಬೇಕೆಂಬ ಪರಿಸ್ಥಿತಿ ಇದ್ದೇ ಇದೆ. ಕೇಂದ್ರ ಸರ್ಕಾರವು ಇದಕ್ಕೆ ಬೇಕಾದಂತಹ ಹಣಕಾಸು ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಒತ್ತಡ ಹಾಕಬೇಕಿದೆ. ಎಂಡಿಎಂ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಮಾಡಿದರೆ ಮಾತ್ರವೇ ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಸರ್ಕಾರದ ಸುತ್ತೋಲೆಯಲ್ಲಿ ೪ ಗಂಟೆ ಕೆಲಸವೆಂದು ನಿಗದಿಯಾಗಿದೆ. ಆದರೆ ಪ್ರತಿಶಾಲೆಯಲ್ಲಿಯೂ ದಿನಕ್ಕೆ ೬ ಗಂಟೆ ಕೆಲಸವಾಗುತ್ತದೆ. ೧೯೪೮ರ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ ೪ ಗಂಟೆಗಿಂತ ಹೆಚ್ಚು ಕೆಲಸ ಮಾಡುವವವರಿಗೆ ಕನಿಷ್ಠ ವೇತನ ನೀಡಬೇಕು. ಆದ್ದರಿಂದ ಸುತ್ತೋಲೆಯಲ್ಲಿ ಕೆಲಸದ ಅವಧಿಯನ್ನು ಬದಲಾಯಿಸಿ ೬ ಗಂಟೆ ಕೆಲಸ ಎಂದು ನಮೂದಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಭರವಸೆ ನೀಡಿದಂತೆ ೬೦೦೦ ರು. ಹೆಚ್ಚಳ ಕೂಡಲೇ ಜಾರಿ ಆಗಬೇಕು ಎಂದು ಒತ್ತಾಯಿಸಿದರು. ಜನಪರವಾಗಿ ಈ ರಾಜ್ಯದ ಅಭಿವೃದ್ಧಿಗಾಗಿ ಎಲ್ಲಾ ವರ್ಗದ ಜನರಿಗೆ ನ್ಯಾಯ ನೀಡುವ ಹೊಸ ಭರವಸೆ ನೀಡಲು ಬಂದಿರುವ ಸಿದ್ದರಾಮಯ್ಯನವರ ಸರ್ಕಾರವು ರಾಜ್ಯದಲ್ಲಿ ಈ ಯೋಜನೆಯ ಅಭಿವೃದ್ಧಿಗೆ ದುಡಿಯುತ್ತಿರುವ ೧ ಲಕ್ಷದ ೧೮ ಸಾವಿರ ಬಡಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಕೂಡಲೇ ವೇತನ ಹೆಚ್ಚಳ ಮಾಡಲು ಮುಂದಾಗಬೇಕೆಂದು ಕೋರಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ಎಂ.ಬಿ. ಪುಷ್ಪ, ಕಾರ್ಯಾಧ್ಯಕ್ಷೆ ಜಿ.ವಿ. ಉಷಾ, ಜಿಲ್ಲಾ ಉಪಾಧ್ಯಕ್ಷರಾದ ಯಶೋಧ, ಮೀನಾಕ್ಷಿ , ಕಾರ್ಯದರ್ಶಿ ಗಳಾದ ಚನ್ನಮ್ಮ, ಸೌಮ್ಯ ಜಿಲ್ಲಾ ಮುಖಂಡರಾದ ಕಸ್ತೂರಿ, ಲೋಲಾಕ್ಷಿ, ಉಷಾ ,ಮಂಜುಳಾ , ಸಾವಿತ್ರಿ, ಸುಮಿತ್ರಾ, ಕಮಲ, ಜಿಕೆ. ಶೋಭಾ, ನಾಸೀರಾಬಾನು, ಜ್ಯೋತಿ, ಯಶೋಧ, ಸುಮಾಬಾಯಿ, ಹೇಮಾವತಿ ಇನ್ನಿತರರು ಭಾಗವಹಿಸಿದ್ದರು.ಫೋಟೋ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))