ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಅಕ್ಷರ ಜಾತ್ರೆ ಎಂದರೆ ಜ್ಞಾನದ ಜಾತ್ರೆಯಾಗಿದೆ. ಪ್ರತಿ ಜಾತ್ರೆಯಲ್ಲಿ ಹೊಟ್ಟೆ ತುಂಬಿದರೆ ಇಲ್ಲಿ ಹೊಟ್ಟೆಯ ಜೊತೆಗೆ ಜ್ಞಾನ ತುಂಬುತ್ತಿದೆ. ಈ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಮಾಡಿದ್ದಾರೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನುಡಿದರು.ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಪ್ರಧಾನ ವೇದಿಕೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-೫೦ರ ಅಂಗವಾಗಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆ ಸಾಂಸ್ಕೃತ ಭಾಷೆಯ ನಂತರ ಎರಡನೇ ಭಾಷೆಯೇ ಕನ್ನಡವಾಗಿದೆ. ನಾಲಿಗೆಗೆ ಹಿತವನ್ನು ನೀಡುವ ಕನ್ನಡ ಭಾಷೆಗೆ ದೊಡ್ಡ ಗೌರವವಿದೆ. ಕನ್ನಡ ಕಂಪು ಶ್ರೀ ಖಾಸ್ಗತಜ್ಜನ ನೆಲದಲ್ಲಿ ಬೆಳಗಲಿಕ್ಕೆ ಹತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದ ಡಾ.ಜಿ.ಎಂ.ಘೀವಾರಿ ಅವರನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದರು.
ಬಳಗಾನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಮಾತನಾಡಿ, ತಾಲೂಕು ಕನ್ನಡ ಸಮ್ಮೇಳನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಸಾಹಿತಿಗಳು, ಕವಿಗಳು, ಜಾನಪದ ಕಲಾವಿದರು ಆಗಮಿಸಿ ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದಾರೆ. ಕನ್ನಡ ಆಡು ಭಾಷೆಯಾಗದೇ ಹೃದಯ ಶ್ರೀಮಂತಿಕೆ ಹೊಂದಿದ ಭಾಷೆಯಾಗಿದೆ. ಇಂತಹ ಭಾಷೆಯ ಅಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಬಿದರಕುಂದಿಯ ಸುಮಲತಾ ಗಡಿಯಪ್ಪನವರ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ಮತ್ತು ಕವನಗಳು ಕೊಡುಗೆ ನೀಡಿದ್ದನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ.ಕಿಶೋರಕುಮಾರ ಮಾತನಾಡಿ, ಕನ್ನಡ ನಾಡು ಸಂಪದ್ಭರಿತ ನಾಡು. ಇಲ್ಲಿ ಅನೇಕ ಕವಿಗಳು, ಸಾಹಿತಿಗಳು ಹುಟ್ಟಿ ಕನ್ನಡ ನಾಡಿಗೆ ಕೊಡುಗೆ ನೀಡಿದ್ದಾರೆ. ನಮ್ಮ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕಾರ, ಆಚಾರ, ವಿಚಾರ ಬಗ್ಗೆ ತಿಳುವಳಿಕೆ ನೀಡಬೇಕಿದೆ ಎ₹ದರು.
ಅನೇಕ ಕವಿಯತ್ರಿಯರು ಕವನಗಳನ್ನು ವಾಚಿಸಿದರು. ಕವಿಯತ್ರಿಗಳಿಗೆ ಸನ್ಮಾನಿಸಲಾಯಿತು. ಬಿಇಒ ಬಿ.ಎಸ್.ಸಾವಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರು ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಶಿಕ್ಷಕ ಆರ್.ಬಿ.ದಮ್ಮೂರಮಠ, ಪ್ರಭುಗೌಡ ಚೌದ್ರಿ, ಬಿ.ಆರ್.ಪೊಲೀಸ್‌ಪಾಟೀಲ, ಪಿ.ಬಿ.ಭಂಟನೂರ, ಎಂ.ಎ.ಬಾಗೇವಾಡಿ, ಬಾಪುಗೌಡ ಬಿರಾದಾರ, ಸಂಗಮೇಶ ದೇಸಾಯಿ, ಶಶಿಧರ ಡಿಸಲೆ, ನಿಸಾರ ಬೇಪಾರಿ, ಘನಶ್ಯಾಮ ಚವ್ಹಾಣ, ಎಂ.ಸಿ.ಯಾಳವಾರ, ಆರ್.ಜೆ.ರಾಠೋಡ ಉಪಸ್ಥಿತರಿದ್ದರು.------------------