ಅಕ್ಷರದಾಸೋಹ ಯೋಜನೆ ವಿದ್ಯಾರ್ಥಿಗಳ ಹಾಜರಾತಿಗೆ ಪೂರಕ

| Published : Mar 30 2024, 12:55 AM IST

ಸಾರಾಂಶ

ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಯೋಜನೆಯಲ್ಲಿ ವಿಶೇಷ ಭೋಜನ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮೂಡಲಗಿ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಳಕ್ಕೆ ಸರ್ಕಾರದ ಅಕ್ಷರದಾಸೋಹ ಯೋಜನೆ ತುಂಬಾ ಪರಿಣಾಮಕಾರಿಯಾಗಿದೆ ಎಂದು ಮುಖ್ಯ ಶಿಕ್ಷಕ ಎ.ವಿ. ಗಿರೆಣ್ಣವರ ಹೇಳಿದರು.

ಗುರುವಾರ ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಯೋಜನೆಯಲ್ಲಿ ವಿಶೇಷ ಭೋಜನ ಏರ್ಪಡಿಸಿ ಮಾತನಾಡಿ, ವಿದ್ಯಾರ್ಥಿಗಳ ಹಸಿವಿನಿಂದ ಶಾಲಾ ದಾಖಲಾತಿ ಹಾಗೂ ಹಾಜರಾತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಅಕ್ಷರದಾಸೋಹ ಯೋಜನೆ ದೇಶದಲ್ಲಿ ಎಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಪೌಷ್ಟಿಕಾಂಶದ ಹಾಲು, ರಾಗಿ , ಬಾಳೆ ಹಣ್ಣು ಹಾಗೂ ಮಾತ್ರೆಗಳನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಹಸಿವಿನ ಸಮಸ್ಯೆ ನೀಗಿ ಕಲಿಕೆಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳು ಆರೋಗ್ಯದಿಂದ ಇದ್ದಾಗ ಮಾತ್ರ ಎಲ್ಲವೂ ಸಾದ್ಯ ಎಂದು ಹೇಳಿದರು.

ವಿಶೇಷ ಭೋಜನದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಕುರ್ಮಾ ಪುರಿ, ಬಟಾಣಿ ಭಾಜಿ, ಪುಳಿಯೊಗರೆ, ಸಾಂಬಾರ ಬಡಿಸಲಾಯಿತು.ಶಿಕ್ಷಕರಾದ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಪುಷ್ಪಾ ಭರಮದೆ, ಶಂಕರ ಲಮಾಣಿ, ಬಸವರಾಜ ನಾಯಕ, ಪ್ರಿಯಾಂಕಾ ಡಿ.ಕೆ. ಸೋಮಶೇಖರ ವೈ.ಆರ್., ಸುಜಾತಾ ಕೋಳಿ, ರೂಪಾ ಹೂಲಿಕಟ್ಟಿ, ಮಹಾದೇವ ಗೋಮಾಡಿ, ಲಕ್ಷ್ಮೀ ಹೆಬ್ಬಾಳ ಉಪಸ್ಥಿತರಿದ್ದರು.