ಮೌನೇಶ ವಿಶ್ವಕರ್ಮ

ಬಂಟ್ವಾಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವೃತ್ತಿಪರ ಶಿಕ್ಷಣ ಹಾಗೂ ಜಾಗತಿಕ ಅವಕಾಶಗಳು ಸಿಗುವುದು ಅಪರೂಪ. ಆದರೆ ಪುತ್ತೂರಿನ ಸಂಪ್ಯದ ಅಕ್ಷಯ ಎಜುಕೇಶನಲ್ ಅಂಡ್‌ ಚಾರಿಟೆಬಲ್ ಟ್ರಸ್ಟ್ ಮೂಲಕ ಕಾರ್‍ಯನಿರ್ವಹಿಸುತ್ತಿರುವ ಅಕ್ಷಯ ಕಾಲೇಜು ಈ ಕಲ್ಪನೆಯನ್ನು ವಾಸ್ತವವಾಗಿ ರೂಪಿಸಿ ತೋರಿಸಿದೆ.ಪುತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಏವಿಯೇಷನ್ (Aviation), ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಹಾಸ್ಪಿಟಾಲಿಟಿ ಸೈನ್ಸ್ (Hotel Management) ಎಂಬ ಅತ್ಯಾಧುನಿಕ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಿದ ಹೆಗ್ಗಳಿಕೆ ಅಕ್ಷಯ ಕಾಲೇಜಿನದು. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಈ ಸಂಸ್ಥೆ ಹೋಗಲಾಡಿಸಿದೆ.

ಕಳೆದ ಮೂರು ವರ್ಷಗಳಿಂದ ಏವಿಯೇಷನ್ ಕೋರ್ಸ್ ಮುಖಾಂತರ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಏರ್‌ಲೈನ್ಸ್‌ಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದು, ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಇದೀಗ ಅದಕ್ಕಿಂತಲೂ ದೊಡ್ಡ ಹೆಜ್ಜೆಯಾಗಿ, ಇದೇ ಶೈಕ್ಷಣಿಕ ವರ್ಷದಲ್ಲಿ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಈ ಮಹತ್ವದ ಅವಕಾಶದ ಮೂಲಕ 12 ವಿದ್ಯಾರ್ಥಿಗಳು ಮಾರಿಷಸ್ ದೇಶಕ್ಕೆ ತೆರಳಿದ್ದು, ಇದು ಗ್ರಾಮೀಣ ವಿದ್ಯಾರ್ಥಿಗಳ ಬದುಕಿನಲ್ಲಿ ಅಪರೂಪದ ಅನುಭವವಾಗಿದೆ. ತೃತೀಯ ಬಿಕಾಂ ವಿತ್ ಏವಿಯೇಷನ್ ಅಂಡ್‌ ಹಾಸ್ಪಿಟಾಲಿಟಿ ಮ್ಯಾನೇಜ್‌ ಮೆಂಟ್ ವಿಭಾಗದ ಉಜ್ವಲ್ ಯು. ನಾಯ್ಕ್, ಪ್ರಜ್ಞಾ ಪಿ. ಪೂಜಾರಿ, ಮೋಕ್ಷಿತಾ ಕೆ., ಕೌಶಿಕ್ ವೈ.ಎನ್., ನಿಹಾ ಪರ್ವಿನ್ ಹಾಗೂ ತೃತೀಯ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಲಿಕಿತ್ ಪಿ., ಅಖಿಲೇಶ್ ಜೆ.ಎಂ., ಸಿಂಚನ್ ಬಿ.ಎಸ್., ನಂದನ್, ಚಿತ್ರ, ಗೀತಾ ಮತ್ತು ಬಿಂದುಶ್ರೀ ಸಿ.ಆರ್. ಅವರು ಈಗಾಗಲೇ ಆಯ್ಕೆಯಾಗಿದ್ದು, ಮಾರಿಷಸ್ ಗೆ ತೆರಳಿದ್ದಾರೆ. ಇನ್ನೂ ಸುಮಾರು 15 ವಿದ್ಯಾರ್ಥಿಗಳು ಫೆಬ್ರವರಿ ಅಂತ್ಯದೊಳಗೆ ಇಂಟರ್ನ್‌ಶಿಪ್‌ಗೆ ತೆರಳಲಿದ್ದಾರೆ.ಗ್ರಾಮೀಣ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಪಡೆದುಕೊಳ್ಳುತ್ತಿರುವುದು ಅಕ್ಷಯ ಕಾಲೇಜಿನ ದೃಷ್ಟಿಕೋನ ಮತ್ತು ಶ್ರಮದ ಫಲವಾಗಿದೆ. ಈ ಸಾಧನೆ ಕಾಲೇಜಿನ ಪ್ರತಿಷ್ಠೆಯನ್ನು ಮಾತ್ರವಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಭವಿಷ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದ್ದು, ಅಕ್ಷಯ ಕಾಲೇಜು ಗ್ರಾಮೀಣ ಶಿಕ್ಷಣಕ್ಕೆ ಹೊಸ ದಿಕ್ಕು ನೀಡುತ್ತಿರುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.