ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮೂರು ದಿನಗಳ ಹಿಂದೆ ಗೃಹ ಲಕ್ಷ್ಮೀ ಯೋಜನೆ ಕಂತು ಪಾವತಿ ಸಂಬಂಧ ನೀಡಿದ್ದ ತಪ್ಪು ಉತ್ತರದಿಂದ ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು 

ಸುವರ್ಣ ವಿಧಾನಸಭೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮೂರು ದಿನಗಳ ಹಿಂದೆ ಗೃಹ ಲಕ್ಷ್ಮೀ ಯೋಜನೆ ಕಂತು ಪಾವತಿ ಸಂಬಂಧ ನೀಡಿದ್ದ ತಪ್ಪು ಉತ್ತರದಿಂದ ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ, ಟೀಕೆ, ಪ್ರತಿ ಟೀಕೆ, ವಾಗ್ವಾದ, ಮಾತಿನ ಚಕಮಕಿಗೂ ಇದು ಕಾರಣವಾಯಿತು.

ತಪ್ಪು ಉತ್ತರ ನೀಡಿದ ಸಚಿವೆ ಸದನದಲ್ಲಿ ಇಡೀ ರಾಜ್ಯದ ಕ್ಷಮೆ ಕೇಳಬೇಕು ಎಂದು ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಆಗ್ರಹಿಸಿದರು. ಕೊನೆಗೆ ವಿಪಕ್ಷಗಳ ಒತ್ತಾಯಕ್ಕೆ ಮಣಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿಷಾದ ವ್ಯಕ್ತಪಡಿಸಿದರು. ಕೊನೆಗೆ ಕ್ಷಮೆಯನ್ನೂ ಯಾಚಿಸಿದರು. ಅಷ್ಟಕ್ಕೂ ತೃಪ್ತರಾಗದ ವಿಪಕ್ಷ ಸದಸ್ಯರು, ಸಚಿವರ ಉತ್ತರ ಸರಿಯಿಲ್ಲ. ಎರಡು ತಿಂಗಳ ಬಾಕಿ ಯಾವಾಗ ಹಾಕುತ್ತೇವೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿದರು.

ಬೆಳಗ್ಗೆ ಕಲಾಪ ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಮಾತನಾಡಿ, ಮೂರು ದಿನಗಳ ಹಿಂದೆ ಸದಸ್ಯ ಮಹೇಶ್‌ ಟೆಂಗಿನಕಾಯಿ ಅವರ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗೃಹಲಕ್ಷ್ಮೀ ಯೋಜನೆಯ ಕಳೆದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಸಲಾಗಿದೆ ಎಂದು ತಪ್ಪು ಉತ್ತರ ನೀಡಿದ್ದಾರೆ. ಮೂರು ದಿನದಿಂದ ಅವರು ಸದನಕ್ಕೆ ಬರುತ್ತಿಲ್ಲ. ಇದು ಸದನದ ಗೌರವದ ಪ್ರಶ್ನೆ. ಸಚಿವೆಯನ್ನು ಕರೆಸಿ ಈ ಬಗ್ಗೆ ಸ್ಪಷ್ಟನೆ ಕೊಡಿಸಿ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಅವರನ್ನು ಆಗ್ರಹಿಸಿದರು.

ಉದ್ದೇಶಪೂರ್ವಕ ಹೇಳಿಲ್ಲ:

ಇದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ, ಈ ವಿಚಾರವನ್ನು ಮೊನ್ನೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಉತ್ತರ ನೀಡುವಾಗ ಸಚಿವೆ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಿದೆ. ಉದ್ದೇಶಪೂರ್ವಕವಾಗಿ ಅವರು ತಪ್ಪು ಮಾಹಿತಿ ನೀಡಿಲ್ಲ. ಸುಳ್ಳು ಹೇಳುವ ಉದ್ದೇಶ ಅವರಿಗೆ ಇರಲಿಲ್ಲ. ಹಾಗೇನಾದರೂ ಎರಡು ತಿಂಗಳ ಕಂತು ಪಾವತಿಯಾಗದಿದ್ದಲ್ಲಿ ಪಾವತಿಸುವುದಾಗಿ ಮುಖ್ಯಮಂತ್ರಿಗಳೂ ಸಹ ಹೇಳಿದ್ದಾರೆ ಎಂದರು.

ಇದಕ್ಕೆ ಸ್ಪೀಕರ್ ಖಾದರ್ ಅವರು, ಸಚಿವೆಯನ್ನು ಕರೆಸಿ ಉತ್ತರ ಕೊಡಿಸುವೆ ಎಂದರು. ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಇದು 1.24 ಕೋಟಿ ಮಹಿಳೆಯರಿಗೆ ಸಂಬಂಧಿಸಿದ ವಿಚಾರ. ಎರಡು ತಿಂಗಳ ಕಂತು ಪಾವತಿಸಿಲ್ಲ. ಯಾವ ಕಾರಣಕ್ಕೆ ಎರಡು ತಿಂಗಳು ಹಣ ಪಾವತಿಸಿಲ್ಲ. ಮೋಸ ಮಾಡಲು ಹೀಗೆ ಮಾಡಿದ್ರಾ? ಸ್ವಂತಕ್ಕೆ ಅಥವಾ ಪಕ್ಷಕ್ಕಾಗಿ ಹೀಗೆ ಮಾಡಿದ್ರಾ? ಸಚಿವೆಯನ್ನು ಸದನಕ್ಕೆ ಕರೆಸಿ ಸ್ಪಷ್ಟನೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಸಚಿವೆ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಸ್ಪೀಕರ್ ಖಾದರ್ ಅವರು 10 ನಿಮಿಷ ಸದನ ಮುಂದೂಡಿದರು.

ಬಳಿಕ ಒಂದು ತಾಸಿನ ಬಳಿಕ ಸದನ ಮತ್ತೆ ಆರಂಭವಾಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನಕ್ಕೆ ಬಂದರು. ಆದರೂ ವಿಪಕ್ಷದ ಶಾಸಕರು ಸದನ ಬಾವಿಯಲ್ಲೇ ತಮ್ಮ ಧರಣಿ ಮುಂದುವರೆಸಿದರು. ಈ ವೇಳೆ ಸ್ಪೀಕರ್ ಖಾದರ್‌ ಅವರು ಸಚಿವೆ ಸದನಕ್ಕೆ ಬಂದಿದ್ದಾರೆ. ತಮ್ಮ ಆಸನಗಳಲ್ಲಿ ಕುಳಿತುಕೊಂಡರೆ ಸಚಿವೆ ಉತ್ತರ ಕೊಡುತ್ತಾರೆ ಎಂದರು. ಇದಕ್ಕೆ ಮಣಿಯದ ವಿಪಕ್ಷಗಳ ಶಾಸಕರು ಧರಣಿ ಮುಂದುವರೆಸಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್, ಎರಡು ತಿಂಗಳ ಬಾಕಿ ಎಂದರೆ ಸುಮಾರು 5 ಸಾವಿರ ಕೋಟಿ ರು. ಮಹಿಳೆಯರಿಗೆ ಪಾವತಿಸಿಲ್ಲ. ಆ ಹಣ ಎಲ್ಲಿಗೆ ಹೋಯಿತು? ಮಧ್ಯೆ ಎರಡು ತಿಂಗಳು ಹೇಗೆ ಜಂಪ್ ಆಯಿತು? ಇದಕ್ಕೆ ಸಚಿವೆ ಉತ್ತರಿಸಬೇಕು. ಅವರು ನೀಡಿರುವ ತಪ್ಪು ಉತ್ತರಕ್ಕೆ ಇಡೀ ರಾಜ್ಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸ್ಪೀಕರ್ ಅವರ ಮನವೊಲಿಕೆ ಬಳಿಕ ದರಣಿ ಕೈ ಬಿಟ್ಟ ವಿಪಕ್ಷಗಳ ಸದಸ್ಯರು ತಮ್ಮ ಆಸನಗಳತ್ತ ತೆರಳಿದರು.

ಸಚಿವೆ ವಿಷಾದ, ಕ್ಷಮೆ:

ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಮೊನ್ನೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಗೃಹ ಲಕ್ಷ್ಮೀ ವಿಚಾರವಾಗಿ ಪ್ರಶ್ನೆ ಕೇಳಿದ್ದರು. ಮಾಹಿತಿ ನೀಡುವಾಗ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಸಲಾಗಿದೆ ಎಂದು ಹೇಳಿದ್ದೇನೆ. ಈ ಎರಡೂ ತಿಂಗಳು ಹಾಕಿಲ್ಲ. ಮಾಹಿತಿ ನೀಡುವಾಗ ಹೆಚ್ಚುಕಮ್ಮಿಯಾಗಿದೆ. ತಪ್ಪು ಮಾಹಿತಿ ನೀಡಿ ಸದನದ ದಾರಿ ತಪ್ಪಿಸುವ ಉದ್ದೇಶವಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಈ ಹಣ ಬೇರೆ ಕಡೆ ಹೋಗಿಲ್ಲ. ಈ ಎರಡೂ ತಿಂಗಳ ಹಣ ಮುಂದಿನ ದಿನಗಳಲ್ಲಿ ಪಾವತಿಸುತ್ತೇವೆ ಎಂದರು.

ಇದಕ್ಕೆ ತೃಪ್ತರಾಗದ ವಿಪಕ್ಷದ ಸದಸ್ಯರು ಸಚಿವೆಯ ಕ್ಷಮೆಗೆ ಪಟ್ಟು ಹಿಡಿದರು. ಅದರಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಸಚಿವೆ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಅಶೋಕ್, ತಪ್ಪಾಗಿದೆ ಎಂದು ಸದನದಲ್ಲಿ ಹೇಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಚಿವ ಎಚ್.ಕೆ.ಪಾಟೀಲ್, ವಿಪಕ್ಷ ನಾಯಕರ ಒತ್ತಾಯದಂತೆ ಸಚಿವೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಈ ಚರ್ಚೆ ಮುಗಿಸಿ ಎಂದರು.

ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲ. ಸರ್ಕಾರ ದಿವಾಳಿಯಾಗಿದೆ. ಎರಡು ತಿಂಗಳ ಕಂತು ಬಾಕಿ ಉಳಿಸಿಕೊಳ್ಳಲು ಇದು ಲಾಂಗ್ ಜಂಪ್ ಅಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿ ವಿಪಕ್ಷ ಸದಸ್ಯರ ವಿರುದ್ಧ ಮುಗಿಬಿದ್ದರು.

ಗ್ಯಾರಂಟಿ ಫಾಲೋ ಮಾಡಿ ಬಿಜೆಪಿ ಗೆಲುವು-ಡಿಕೆಶಿ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಈ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಅನುದಾನ ನೀಡುವುದಾಗಿ ಬಜೆಟ್‌ ನಲ್ಲಿ ಘೋಷಿಸಿದ್ದರು. ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಈವರೆಗೂ ಒಂದೇ ಒಂದು ರುಪಾಯಿ ಕೊಟ್ಟಿಲ್ಲ. ಹಾಗಾದರೆ, ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಲಾಗುತ್ತಾ? ಬಿಜೆಪಿ, ಎನ್‌ಡಿಎ ಮೈತ್ರಿ ಪಕ್ಷಗಳು ನಮ್ಮ ಗ್ಯಾರಂಟಿ ಯೋಜನೆಗಳನ್ನು ಫಾಲೋ ಮಾಡಿ ಚುನಾವಣೆ ಗೆದ್ದಿದ್ದೀರಿ. ನಮ್ಮ ಗ್ಯಾರಂಟಿ ಇಲ್ಲದಿದ್ದರೆ, ನೀವು ಚುನಾವಣೆ ಗೆಲ್ಲಲು ಆಗುತ್ತಿರಲಿಲ್ಲ ಎನ್ನುವ ಮುಖಾಂತರ ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು. ಇದಕ್ಕೆ ಪೂರಕವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮತ ಚೋರಿ ಮಾಡಿ ನೀವು ಗೆದ್ದವರು ಎಂದು ಆರೋಪಿಸಿದರು. ಈ ಮಾತಿನಿಂದ ವಿಪಕ್ಷ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ರಾಜೀನಾಮೆ ಕೊಟ್ಟು ಗೆದ್ದು ಬನ್ನಿ!:

ಚುನಾವಣೆ ವಿಚಾರದಲ್ಲಿ ವಿಪಕ್ಷದ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನಚಕಮಕಿ ನಡೆದು ಗದ್ದಲ ಏರ್ಪಟ್ಟಿತು. ಇದರಿಂದ ಕೋಪಗೊಂಡ ಸ್ಪೀಕರ್‌ ಖಾದರ್‌, ಯಾರಿಗೆ ಚುನಾವಣೆ ಬೇಕು. ಅವರು ಕೈ ಮೇಲೆ ಎತ್ತಿ. ನನಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಂತು ಗೆದ್ದು ಬನ್ನಿ ಎಂದು ಚಾಟಿ ಬೀಸಿದರು.

ಬಳಿಕ ವಿಪಕ್ಷ ನಾಯಕ ಆರ್.ಅಶೋಕ್‌ ಮಾತನಾಡಿ, ಸಚಿವೆ ಅಂದು ಸದನಕ್ಕೆ ನೀಡಿದ ತಪ್ಪು ಉತ್ತರವನ್ನು ಕಡತದಿಂದ ತೆಗೆಸಬೇಕು. ಇಲ್ಲವಾದರೆ, ಇಲ್ಲಿ ಎಲ್ಲ ಮಂತ್ರಿಗಳ್ಳು ಸುಳ್ಳು ಹೇಳುತ್ತಾರೆ ಎಂದಾಗುತ್ತದೆ. ಸಚಿವೆ ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ದನಿ ಗೂಡಿಸಿದ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ಸಚಿವೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮಹಿಳೆ ಎಂಬ ಕಾರಣಕ್ಕೆ ಎಲ್ಲರೂ ಮಾತು:

ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾತನಾಡಿ, ಈವರೆಗೂ ಗೃಹ ಲಕ್ಷ್ಮೀ ಯೋಜನೆಯಡಿ 52,416 ಕೋಟಿ ರು. ಪಾವತಿಸಲಾಗಿದೆ. ಇದು ಮಹಿಳೆಯರಲ್ಲಿ ಗೌರವ, ಸ್ವಾಭಿಮಾನ ಹಾಗೂ ಆತ್ಮಸ್ಥೈರ್ಯ ತುಂಬಿದೆ. ನನ್ನ ಮಾತುಗಳಿಗೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಇದು ಸುರೇಶ್ ಕುಮಾರ್ ಅವರಿಗೆ ಇಷ್ಟವಾಗದಿದ್ದರೆ ಕ್ಷಮೆಯನ್ನೂ ಕೇಳುತ್ತೇನೆ. ನಾನು ಮಹಿಳೆ ಎಂದು ನೀವೆಲ್ಲರೂ ಮಾತನಾಡುತ್ತಿದ್ದೀರಿ ಎಂದು ಹೇಳಿದರು.

ಸಚಿವ ಶರಣ ಪ್ರಕಾಶ್ ಪಾಟೀಲ್‌ ಮಾತನಾಡಿ, ಮಹಿಳೆ ಮೇಲೆ ಈ ರೀತಿ ಮುಗಿ ಬೀಳುವುದು ಸರಿಯಲ್ಲ. ಮಂತ್ರಿ ತಪ್ಪು ಮಾಡಿದರೆ ತಿದ್ದಿಕೊಳ್ಳಲು ನಡಾವಳಿಯಲ್ಲಿ ಅವಕಾಶವಿದೆ ಎಂದರು. ಇದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಆರ್‌.ಅಶೋಕ್, ಸಚಿವೆ ತಾನು ಮಹಿಳೆ ಎಂದು ಆಶ್ರಯ ಪಡೆಯುವುದು ಬೇಡ. ಇದನ್ನು ಕಡತದಿಂದ ತೆಗೆಸಿ. ಇಲ್ಲಿ ಮಹಿಳೆ ಮತ್ತು ಪುರುಷ ಸಮಾನರು. ಸಚಿವೆಯ ಉತ್ತರ ಸರಿಯಿಲ್ಲ. 2 ತಿಂಗಳ ಬಾಕಿ ಯಾವಾಗ ಕೊಡುತ್ತೇವೆ ಎಂದು ಹೇಳಲಿಲ್ಲ. ಹೀಗಾಗಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದರು. ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು. ಬಳಿಕ ಸ್ಪೀಕರ್ ಪ್ರಶ್ನೋತ್ತರ ಕಲಾಪ ಆರಂಭಿಸಿದರು.