ಆಲಮಟ್ಟಿ ಡ್ಯಾಂ 524 ಮೀ. ಎತ್ತರಕ್ಕೆ ಸಂಸದ ಕಾರಜೋಳ ಆಗ್ರಹ

| Published : Dec 02 2024, 01:19 AM IST

ಸಾರಾಂಶ

ರಾಜ್ಯ ಸರ್ಕಾರ ಅಫಿಡವಿಟ್ ಹಾಕಲು ಮುಂದಾಗುವ ಮೂಲಕ ಉತ್ತರ ಕರ್ನಾಟಕದ 5 ಜಿಲ್ಲೆಗಳ ಜನರಿಗೆ ದೊಡ್ಡ ದ್ರೋಹ ಮಾಡಲು ಹೊರಟಿದೆ ಎಂದು ಸಂಸದ ಗೋವಿಂದ ಕಾರಜೋಳ ಆಕ್ರೋಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಲಮಟ್ಟಿ ಜಲಾಶಯದಲ್ಲಿ ಕೇವಲ 522 ಮೀ. ವರೆಗೆ ಮಾತ್ರ ನೀರನ್ನು ನಿಲ್ಲಿಸುತ್ತೇವೆ ಎಂದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ರಾಜ್ಯ ಸರ್ಕಾರ ಅಫಿಡವಿಟ್ ಹಾಕಲು ಮುಂದಾಗುವ ಮೂಲಕ ಉತ್ತರ ಕರ್ನಾಟಕದ 5 ಜಿಲ್ಲೆಗಳ ಜನರಿಗೆ ದೊಡ್ಡ ದ್ರೋಹ ಮಾಡಲು ಹೊರಟಿದೆ ಎಂದು ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 524.256 ಮೀ. ವರೆಗೆ ನೀರು ನಿಂತರೆ ಉತ್ತರ ಕರ್ನಾಟಕದ ಐದಾರು ಜಿಲ್ಲೆಯಲ್ಲಿ 15 ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ ಎಂದು ಕಾಯುತ್ತಿದ್ದ ರೈತರಿಗೆ ಸರ್ಕಾರ ದ್ರೋಹ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

524.256 ಮೀ. ವರೆಗೆ ಆಲಮಟ್ಟಿ ಜಲಾಶಯ ಎತ್ತರಿಸಬೇಕು ಎಂದು 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈಗಿನ ರಾಜ್ಯ ಸರ್ಕಾರ 522 ಮೀ.ವರೆಗೆ ಮಾತ್ರ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸುತ್ತೇವೆ ಎಂಬುದರ ವಿರುದ್ಧ ಉತ್ತರ ಕರ್ನಾಟಕದ ಐದೂ ಜಿಲ್ಲೆಗಳ ರೈತರು ಸರ್ಕಾರದ ವಿರುದ್ಧ ಬಂಡೇಳಬೇಕು. ತಕ್ಷಣವೇ ಸರ್ಕಾರ ಕೋರ್ಟ್‌ನಲ್ಲಿ ಅಫಿಡವಿಟ್ ಹಾಕುವುದನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಭೂಮಿಗೆ ₹24 ಲಕ್ಷ ಹಾಗೂ ಒಣಬೇಸಾಯಕ್ಕೆ ₹20 ಲಕ್ಷ ದರ ಘೋಷಿಸಿ ರೈತರ 18 ವರ್ಷದ ಬೇಡಿಕೆ ಈಡೇರಿಸಿದ್ದೆ. 20 ಹಳ್ಳಿಗಳ ಕಟ್ಟಡ ಭೂಸ್ವಾಧೀನಕ್ಕೂ ನ್ಯಾಯಯುತ ಬೆಲೆ ನಿಗದಿಪಡಿಸಿದ್ದೆ. ಆಗ ಎಕರೆಗೆ ₹40 ಲಕ್ಷ ನೀಡುವುದಾಗಿ ಕೆಲವರು ರಾಜಕೀಯ ಮಾಡಲು ಮುಂದಾದವರು ₹40 ಲಕ್ಷ ದೂರದ ಮಾತು ನಾವು ಘೋಷಿಸಿದ ಮೊತ್ತವನ್ನಾದರೂ ನೀಡಿ ರೈತರ ನೆರವಿಗೆ ಧಾವಿಸಿ ಎಂದರು.

ಸಿದ್ದರಾಮಯ್ಯ ಅವರ ಮೊದಲ ಸರ್ಕಾರದ ಅವಧಿಯಲ್ಲಿ 2013-14ನೇ ಸಾಲಿಗೆ ₹914 ಕೋಟಿ, 2014-15ರಲ್ಲಿ ₹1,172 ಕೋಟಿ, 2015-16ರಲ್ಲಿ ₹1,537 ಕೋಟಿ, 2016-17ರಲ್ಲಿ ₹2,137 ಕೋಟಿ, 2017-18ರಲ್ಲಿ ₹2,042 ಕೋಟಿ ಹಂಚಿಕೆ ಮಾಡಿತ್ತು. 2018-19ರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹1,079 ಕೋಟಿ ನೀಡಿತ್ತು. 2019-20 ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ₹1,651 ಕೋಟಿ, 2020-21ರಲ್ಲಿ ₹1,600 ಕೋಟಿ, 2021-22ರ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ತಾವು ಜಲಸಂಪನ್ಮೂಲ ಸಚಿವರಾಗಿ ₹1,228 ಕೋಟಿ ಹಾಗೂ 2022-23ರ ಅವಧಿಯಲ್ಲಿ ₹1,928 ಕೋಟಿ ನೀಡಿರುವುದಾಗಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಮುಖಂಡರಾದ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಯಲ್ಲಪ್ಪ ಬೆಂಡಿಗೇರಿ ಸೇರಿ ಇತರರಿದ್ದರು.

ಈಗಿನ ರಾಜ್ಯ ಸರ್ಕಾರ 522 ಮೀ.ವರೆಗೆ ಮಾತ್ರ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸುತ್ತೇವೆ ಎಂಬುದರ ವಿರುದ್ಧ ಉತ್ತರ ಕರ್ನಾಟಕದ ಐದೂ ಜಿಲ್ಲೆಗಳ ರೈತರು ಸರ್ಕಾರದ ವಿರುದ್ಧ ಬಂಡೇಳಬೇಕು. ತಕ್ಷಣವೇ ಸರ್ಕಾರ ಕೋರ್ಟ್‌ನಲ್ಲಿ ಅಫಿಡವಿಟ್ ಹಾಕುವುದನ್ನು ಹಿಂದಕ್ಕೆ ಪಡೆಯಲಿ.

ಗೋವಿಂದ ಕಾರಜೋಳ ಸಂಸದ.