ಸಾರಾಂಶ
- ಸಂಸದ ಜಿ.ಕುಮಾರ ನಾಯಕ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ
----ಕನ್ನಡಪ್ರಭ ವಾರ್ತೆ ರಾಯಚೂರು
ಆಲಮಟ್ಟಿ-ಹುಣಸಗಿ-ಯಾದಗಿರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ಕುರಿತು ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಸುಧೀರ್ಘ ಚರ್ಚಿಸಿದರು.ಗುರುವಾರ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಸಂಸದ ಜಿ. ಕುಮಾರ ನಾಯಕ, ರೈಲ್ವೆ ಮಾರ್ಗದ ಉಪಯೋಗ ಹಾಗೂ ಇತಿಹಾಸದ ಕುರಿತು ಸಚಿವರಿಗೆ ಮನವರಿಕೆ ಮಾಡಿದರು. ಅಂದಿನ ಬ್ರಿಟಿಷ ಆಡಳಿತದಲ್ಲಿಯೇ ಈ ರೈಲು ಮಾರ್ಗಕ್ಕೆ ನೀಲನಕ್ಷೆ ತಯಾರಿಸಿದ್ದು, ಈ ಮಾರ್ಗದಿಂದ ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ನೆರವಾಗಲಿದೆ. ವಿಜಯಪುರ ಮತ್ತು ಯಾದಗಿರಿ ನಡುವಣ ಪ್ರಸ್ತುತ ರೈಲು ಮಾರ್ಗದ ದೂರವು 338 ಕಿಮೀಗಳಷ್ಟಿದೆ. ಜನರು ಹೊಟಗಿ, ಕಲಬುರಗಿ ಮತ್ತು ವಾಡಿ ಮೂಲಕ ಯಾದಗಿರಿಗೆ ಪ್ರಯಾಣಿಸುತ್ತಿದ್ದಾರೆ. ಹೊಸ ರೈಲ್ವೆ ಮಾರ್ಗ ಅನುಷ್ಠಾನವಾದರೆ ಅಂದಾಜು 170 ಕಿಮೀ ಸಂಚಾರ ಉಳಿಯಲಿದ್ದು, ವ್ಯವಹಾರ ವಹಿವಾಟಿಗೂ ಅನುಕೂಲದ ಜೊತೆಗೆ ಆರ್ಥಿಕ ಪ್ರಗತಿಗೂ ನೆರವಾಗಲಿದ್ದು, ರಾಜ್ಯ ಸರ್ಕಾರದ ಸಹಕಾರ ಕುರಿತು ಮಾತನಾಡಲಾಗುವುದು ಎಂದು ವಿವರಿಸಿದರು.
ಕರ್ನಾಟಕದ ಒಳನಾಡು ಮೀನು ಸಾಕಾಣಿಕೆಯಲ್ಲಿ ಹುಣಸಗಿ, ಸುರಪುರ, ಯಾದಗಿರಿ ಮುಂಚೂಣಿಯಲ್ಲಿವೆ. ಹೊಸಮಾರ್ಗ ಪ್ರಾರಂಭವಾದರೆ ಸಿಮೆಂಟ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಸಾಗಣೆ ಮತ್ತು ಕೃಷಿ ಉತ್ಪನ್ನಗಳ ಸಾಗಣೆ ಸೇರಿ ಇನ್ನಿತರ ವ್ಯವಹಾರ, ವಹಿವಾಟು ಹಾಗೂ ಸರಕುಸಾಗಾಣಿಕೆಯ ಜೊತೆಗೆ ಈ ಭಾಗದ ಆರ್ಥಿಕ ವೃದ್ಧಿಗೆ ನಾಂದಿಯಾಗಿ ಹಿಂದುಳಿದ ಹಣೆಪಟ್ಟಿ ಕಳಚುವ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವರಿಗೆ ಸಂಸದರು ಮನವಿ ಮಾಡಿದ್ದಾರೆ.-------
12ಕೆಪಿಆರ್‌ಸಿಆರ್ 02: ಸಂಸದ ಜಿ.ಕುಮಾರ ನಾಯಕ ಅವರು ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಆಲಮಟ್ಟಿಹುಣಸಿಗಿ-ಯಾದಗಿರಿ ರೈಲ್ವೆ ಮಾರ್ಗ ಕುರಿತು ರೈಲ್ವೆ ಸಚಿವರೊಂದಿಗೆ ಸಂಸದರ ಸುಧೀರ್ಘ ಚರ್ಚೆ ನಡೆಸಿದರು.