ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ. ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರುನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ. ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.ತುಮಕೂರಿನ ಶೆಟ್ಟಿಹಳ್ಳಿಯ ಸೂಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಭಾರತೀಯ ಕಾನೂನು ತಜ್ಞರು ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ವೇಳೆ, ದೇಶದಲ್ಲಿ ಸೈಬರ್ ಅಪರಾಧ ದೊಡ್ಡ ಸವಾಲಾಗಿದ್ದು,ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು.ಸಂವಿಧಾನದ ಪೂರ್ವಪೀಠಿಕೆಯಲ್ಲಿ ಸಮಾನತೆಗೆ ಮಹತ್ವ ನೀಡಲಾಗಿದ್ದರೂ, ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬ ಬಗ್ಗೆ ಗಂಭೀರ ವಿಶ್ಲೇಷಣೆ ಅಗತ್ಯವಿದೆ. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಕೇವಲ 12 ಶೇಕಡಾ ಇದ್ದರೆ, ಈಗ ಅದು ಸುಮಾರು ಶೇ. 80 ಕ್ಕೆ ಏರಿಕೆಯಾಗಿದೆ. ಕಾನೂನು ಪದವಿ ಪಡೆದವರು ಕೇವಲ ವೃತ್ತಿ ದೃಷ್ಟಿಯಿಂದಲ್ಲ,ಕಾನೂನಿನ ರಕ್ಷಣೆ ಮತ್ತು ನ್ಯಾಯ ಸೇವೆಯ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವ ಹಿಸಬೇಕು ಎಂದು ಡಾ.ಜಿ.ಪರಮೇಶ್ವರ್ ಕರೆ ನೀಡಿದರು.ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ಕೆಲವೇ ನ್ಯಾಯವಾದಿಗಳನ್ನು ಹೆಚ್ಚು ಮಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾನೂನಿನ ಆಳವಾದ ಜ್ಞಾನ ಮತ್ತು ಸಮರ್ಥ ವಾದ ಮಂಡನೆಯಿಂದ ಅವರು ವಿಶ್ವಾಸ ಗಳಿಸಿದ್ದಾರೆ. ಹೊಸ ತಲೆಮಾರಿನ ವಕೀಲರೂ ಅದೇ ಮಟ್ಟದ ಪರಿಣತಿ ಸಾಧಿಸಬೇಕು.ಭಾರತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಬಲಿಷ್ಠ ಸಂವಿಧಾನವನ್ನು ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನವೇ ಮೂಲ ಅಡಿಪಾಯವಾಗಿದೆ. ಸಂವಿಧಾನ ದುರ್ಬಲಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ದುರ್ಬಲವಾಗುತ್ತದೆ. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಸಂವಿಧಾನದ ವಿಧಿ ೫೧(ಎ) ಹಾಗೂ ವಿಧಿ 12 ರಿಂದ ೩೫ರವರೆಗೆ ನಾಗರಿಕರ ಕರ್ತವ್ಯಗಳು ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳನ್ನು ಪರಿಣಾಮಕಾರಿಯಾಗಿ ಎತ್ತಿಹಿಡಿಯಲು ಸಾಧ್ಯ ಎಂದರು.ಮಾಜಿ ಸಚಿವ ಹಾಗೂ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಇಂದು ಕಾನೂನು ಪದವಿ ಪಡೆದಿರುವ ನಿಮ್ಮ ಮುಂದೆ ಗುರುತರ ಜವಾಬ್ದಾರಿಗಳಿವೆ. ಅಸಹಾಯಕರು,ದ್ವನಿಯಿಲ್ಲದವರ ಪರ ಕೆಲಸ ಮಾಡಿದರೆ ನಿಮ್ಮ ಪದವಿಗೆ ಗೌರವ ಸಿಗುತ್ತದೆ ಎಂದರು.ವಿಜ್ಞಾನಿ ಡಾ.ಪ್ರಶಾಂತ ಕಾಳಪ್ಪ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಚ್.ಎಂ.ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿ ಅಹಮದ್ ಮಾತನಾಡಿ, ತುಮಕೂರಿನಲ್ಲಿ ನಿರ್ಮಾಣವಾಗುವ ನ್ಯಾಯಾಲಯ ಸಮುಚ್ಚಯದಲ್ಲಿ ಜುಡಿಷಿಯಲ್ ಹೆರಿಟೇಜ್ ಮ್ಯೂಸಿಯಂ ಸ್ಥಾಪಿಸುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದರು.ಸಮಾರಂಭದಲ್ಲಿ ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಅಫ್ತಾಬ್ ಅಹಮದ್,ಸಿಇಒ ಮಹಮದ್ ಜುನೈದ್,ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್.ಎಸ್,ಕಾನೂನು ವಿವಿಯ ಸಿಂಡಿಕೇಟ್ ಸದಸ್ಯ ರಾಜಣ್ಣ, ಹೆಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅದೀಬ್ ಅಹಮದ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ ಮುಂತಾದವರು ಉಪಸ್ಥಿತರಿದ್ದರು.