ರಥ ರಾಜಬೀದಿಯುದ್ದಕ್ಕೂ ಭಾಜಾ, ಭಜಂತ್ರಿ, ವಾದ್ಯವೃಂದ ನಂದಿಕೋಲುಗಳು ಮೆರವಣಿಗೆ
ಕೊಪ್ಪಳ: ತಾಲೂಕಿನ ಅಳವಂಡಿಯ ಶ್ರೀಸಿದ್ಧೇಶ್ವರ ಮಹಾರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿದ್ದು, ನೆರೆದಿದ್ದ ಸಹಸ್ರಾರು ಭಕ್ತರು ಬಾಳೆ ಹಣ್ಣು, ಉತ್ತತ್ತಿ ಎಸೆದು ಪುನೀತರಾದರು.
ಶ್ರೀಸಿದ್ಧೇಶ್ವರ ಮಹಾರಥೋತ್ಸವಕ್ಕೆ ಪೀಠಾಧೀಶ ಶ್ರೀಮರುಳಾರಾಧ್ಯ ಶಿವಾಚಾರ್ಯರು ಚಾಲನೆ ನೀಡುತ್ತಿದ್ದಂತೆ ಗಜಗಾಂಭಿರ್ಯದಲ್ಲಿ ಅಳವಂಡಿ ರಥಬೀದಿಯಲ್ಲಿ ಮಹಾರಥ ಸಾಗಿತು.ಮಹಾರಥ ರಾಜಬೀದಿಯಲ್ಲಿ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದಲ್ಲದೆ ರಥ ಮುಂದೆ ಮುಂದೆ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆಯುತ್ತಲೇ ಜಯಘೋಷ ಹಾಕುತ್ತಿದ್ದರು.
ರಥ ರಾಜಬೀದಿಯುದ್ದಕ್ಕೂ ಭಾಜಾ, ಭಜಂತ್ರಿ, ವಾದ್ಯವೃಂದ ನಂದಿಕೋಲುಗಳು ಮೆರವಣಿಗೆಯಲ್ಲಿ ಸಾಗಿ ಪಾದಗಟ್ಟೆ ತಲುಪಿತು. ಪಾದಗಟ್ಟೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪುನಃ ರಥ ಶ್ರೀಸಿದ್ಧೇಶ್ವರ ಮಠಕ್ಕೆ ಎಳೆದು ತರಲಾಯಿತು. ಮೂಲ ಸ್ಥಳಕ್ಕೆ ನಿಲ್ಲುತ್ತಿದ್ದಂತೆ ನೆರೆದಿದ್ದ ಸಹಸ್ರಾರರು ಭಕ್ತರ ಕರತಾಡನ ಸದ್ದು ಮುಗಿಲುಮುಟ್ಟುವಂತೆ ಇತ್ತು.ಹಿರೇಹಡಗಲಿಯ ಸದ್ಗುರು ಶ್ರೀಸಣ್ಣ ಹಾಲವೀರ ಸ್ವಾಮಿಗಳು ಹಾಗೂ ಅನೇಕ ಗಣ್ಯವ್ಯಕ್ತಿಗಳು ಹಾಗೂ ಗ್ರಾಮದ ಸಕಲ ಸದ್ಭಕ್ತರು ಇದ್ದರು.
ವಿಶೇಷ ಪೂಜೆ:ಮಹಾರಥೋತ್ಸವ ಹಿನ್ನೆಲೆಯಲ್ಲಿ ಶ್ರೀಸಿದ್ಧೇಶ್ವರ ಮಠದಲ್ಲಿ ಶ್ರೀಸಿದ್ಧೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಭಿಷೇಕ ಮತ್ತಿತರರು ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬೆಳಗ್ಗೆ ಧರ್ಮ ಸಭೆ ನಡೆಯಿತು.