ಹಾಲಿಗಿಂತ ಮೊದಲೇ ಸಿಗುತ್ತದೆ ಅಲ್ಕೋಹಾಲ್!

| Published : Jun 28 2024, 12:58 AM IST / Updated: Jun 28 2024, 12:41 PM IST

ಸಾರಾಂಶ

ಗದಗ ನಗರದ ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಬಾರ್‌ನಲ್ಲಿ ದಿನದ 24 ಗಂಟೆಯೂ ಮಾರಾಟ ವ್ಯವಸ್ಥೆ ಇದೆ. ಆದರೆ ತಡರಾತ್ರಿ ಹೋಗುವ ಮದ್ಯಪ್ರಿಯರು ಗ್ಲಾಸ್‌ಗಳನ್ನು ತಾವೇ ತೊಳೆದಿಟ್ಟು ಬರಬೇಕು.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲಾ ಕೇಂದ್ರವಾದ ಗದಗ ಬೆಟಗೇರಿ ಅವಳಿ ನಗರ ಹಾಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಎಷ್ಟೊಂದು ಕಾನೂನು ಬಾಹಿರವಾಗಿ ನಡೆಯುತ್ತದೆ ಎಂದರೆ, ಬೆಳಗಿನ ಹಾಲು ಮಾರಾಟ ಪ್ರಾರಂಭವಾಗುವ ಮೊದಲೇ ಅಲ್ಕೋಹಾಲ್ ಮಾರಾಟ ಪ್ರಾರಂಭವಾಗಿರುತ್ತದೆ. ಬೆಳಗಿನ ಟೀ ಸ್ಟಾಲ್‌ಗಳಂತೆ ಬಾರ್ ನಸುಕಿನ ಜಾವದಲ್ಲಿಯೇ ತೆರೆದಿರುತ್ತವೆ.

ಬಾರ್‌ಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ಸಮಯ ನಿಗದಿ ಮಾಡಿ ಸೂಕ್ತವಾದ ಆದೇಶ ಹೊರಡಿಸಿದೆ. ಬಾರ್ ಲೈಸೆನ್ಸ್ ಕೊಡುವ ಸಂದರ್ಭದಲ್ಲಿಯೂ ಯಾವಾಗೆಲ್ಲಾ ತೆರೆದಿರಬೇಕು ಎನ್ನುವ ಕುರಿತು ಸ್ಪಷ್ಟ ನಿರ್ದೇಶನಗಳಿವೆ. ಆದರೆ ಗದಗ ಜಿಲ್ಲೆಯ ಮಟ್ಟಿಗೆ ಮಾತ್ರ ಆ ನಿರ್ದೇಶನಗಳು ಕಾಗದಕ್ಕೆ ಸೀಮಿತವಾಗಿವೆ.

127 ಬಾರ್‌ಗಳು: ಗದಗ ಜಿಲ್ಲೆಯ ಗದಗ ಬೆಟಗೇರಿ ಅವಳಿ ನಗರ, ರೋಣ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ಗಜೇಂದ್ರಗಡ ವ್ಯಾಪ್ತಿಯ ಒಟ್ಟು 7 ತಾಲೂಕುಗಳ ವ್ಯಾಪ್ತಿಯಲ್ಲಿ ಸಿಎಲ್-2, ಸಿಎಲ್-4, ಸಿಎಲ್-7, ಸಿಎಲ್-9, ಸಿಎಲ್-11 ಸೇರಿದಂತೆ ಒಟ್ಟು 127 ಮದ್ಯ ಮಾರಾಟದ ವಿವಿಧ ಅಂಗಡಿಗಳಿವೆ. ಅವುಗಳಲ್ಲಿ ಬಹುತೇಕ ಅಂಗಡಿಗಳು ಬೆಳಗ್ಗೆ 6ರಿಂದ ತಡರಾತ್ರಿ ವರೆಗೂ ತಮ್ಮ ವ್ಯಾಪಾರ-ವಹಿವಾಟು ನಡೆಸುತ್ತಲೇ ಇರುತ್ತವೆ. ಇದಕ್ಕೆ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ಬಾರ್ ಮಾಲೀಕರ ಪ್ರಭಾವ ಎಷ್ಟೊಂದು ಜೋರಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಎಲ್ಲರಿಗೂ ಮಾಮೂಲು: ಸರ್ಕಾರ ನಿಯಮಗಳ ಪ್ರಕಾರ 9 ಗಂಟೆಯ ಆನಂತರ ಅಂಗಡಿಗಳನ್ನು ತೆರೆಯಬಹುದು. ರಾತ್ರಿ ಬಂದ್ ಮಾಡಬೇಕು. ಯಾಕೆ ಮಾಡುವುದಿಲ್ಲ ಎಂದು ನಾಲ್ಕಾರು ಅಂಗಡಿಗಳ ಮಾಲೀಕರನ್ನು ಕೇಳಿದಾಗ, ಸರ್ ನಮಗೆ ಹೆಚ್ಚಿನ ಸ್ಟಾಕ್ ಕೊಡುತ್ತಾರೆ. ಅದನ್ನು ಅದೇ ತಿಂಗಳಲ್ಲಿಯೇ ಮಾರಾಟ ಮಾಡಬೇಕು. ಸೇಲ್ಸ್ ಹೆಚ್ಚಿಸುವಂತೆ ಅಬಕಾರಿ ಅಧಿಕಾರಿಗಳು ನಿರಂತರವಾಗಿ ಒತ್ತಡ ಹಾಕುತ್ತಾರೆ. ಮುಖ್ಯವಾಗಿ ನಾವು ಎಲ್ಲರಿಗೂ ಪ್ರತಿ ತಿಂಗಳೂ ತಪ್ಪದೇ ಮಾಮೂಲು ಕೊಡುತ್ತೇವೆ. ಅದರಲ್ಲಿ ಪೊಲೀಸ್, ಅಬಕಾರಿ, ಸಂಘ-ಸಂಸ್ಥೆಗಳು ಸೇರಿವೆ. ಹಾಗಾಗಿ ಎಲ್ಲರಿಗೂ ಮಾಮೂಲು ಕೊಟ್ಟು ನಾವು ಬದುಕುವುದಾದರೂ ಹೇಗೆ? ಹಾಗಾಗಿ ಹೆಚ್ಚಿನ ದರಕ್ಕೂ ಮಾರಾಟ ಮಾಡುತ್ತೇವೆ. ಬೆಳಗ್ಗೆಯಿಂದಲೇ ಮಾರಾಟ ಪ್ರಾರಂಭಿಸುತ್ತೇವೆ ಎನ್ನುತ್ತಾರೆ. ಈ ಮೂಲಕ ಈ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದನ್ನು ನೇರವಾಗಿ ಒಪ್ಪಿಕೊಳ್ಳುತ್ತಾರೆ.

ಬೆಳಗಿನ ಬಾರ್‌ಗಳು:

ಗದಗ ನಗರದ ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಬಾರ್‌ನಲ್ಲಿ ದಿನದ 24 ಗಂಟೆಯೂ ಮಾರಾಟ ವ್ಯವಸ್ಥೆ ಇದೆ. ಆದರೆ ತಡರಾತ್ರಿ ಹೋಗುವ ಮದ್ಯಪ್ರಿಯರು ಗ್ಲಾಸ್‌ಗಳನ್ನು ತಾವೇ ತೊಳೆದಿಟ್ಟು ಬರಬೇಕು. ಸ್ಟೇಶನ್ ರಸ್ತೆ, ಕಲಾ ಮಂದಿರ ರಸ್ತೆಯಲ್ಲಿರುವ ಬಾರ್‌ಗಳು ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ಪ್ರಾರಂಭಿಸುತ್ತವೆ. ಈ ಪರಿಸ್ಥಿತಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಇದೆ. ಬಸ್ ನಿಲ್ದಾಣಗಳ ಅಕ್ಕಪಕ್ಕಗಳಲ್ಲಿರುವ ಪ್ರತಿಯೊಂದು ಬಾರ್‌ನಲ್ಲೂಯ ಬೆಳಗ್ಗೆ 5ರಿಂದ ತಡರಾತ್ರಿ ವರೆಗೂ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತದೆ.

ರಾತ್ರಿ ಸ್ಥಗಿತದ ನೆಪದಲ್ಲಿ ಕಿರಿಕಿರಿ: ಬೆಳಗ್ಗೆಯೇ ಬಾರ್‌ಗಳನ್ನು ಯಾವ ಕಾರಣಕ್ಕೆ ತೆರೆಯಲಾಗುತ್ತದೆ ಎನ್ನುವುದಕ್ಕೆ ಕೆಲವು ಬಾರ್ ಕೆಲಸಗಾರರು ಸ್ವಾರಸ್ಯಕರ ವಿಷಯವನ್ನು ಹೇಳುತ್ತಾರೆ. ಪ್ರತಿದಿನ ರಾತ್ರಿ ನಿಗದಿತ ಸಮಯಕ್ಕೆ ನಮ್ಮ ಬಾರ್‌ಗಳನ್ನು ಬಂದ್ ಮಾಡಬೇಕು ಎಂದು ಹೇಳಲು ಬರುವ ಪೊಲೀಸ್ ಸಿಬ್ಬಂದಿ ಕಾಟವೇ ವಿಪರೀತವಾಗಿದೆ. ಮದ್ಯ ಕುಡಿವವರಿಗೆ ಅಲ್ಪ ಪ್ರಮಾಣದಲ್ಲಿ ಉಚಿತ ಮದ್ಯ ಕೊಡಬೇಕು, ಮದ್ಯ ಕುಡಿದವರಿದ್ದರೆ ಅವರಿಗೆ ಒಂದಿಷ್ಟು ಹಣ ಕೊಡಬೇಕು. ಅಂದರೆ ಹೆಚ್ಚು ಹೊತ್ತು ತೆರೆಯಲು ಬಿಡುತ್ತಾರೆ.

 ರಾತ್ರಿ ವೇಳೆಯಲ್ಲಿ ಈ ರೀತಿಯ ಕಿರಿಕಿರಿ ಅನುಭವಿಸುವ ಬದಲು ಬೆಳಗ್ಗೆ ಬೇಗ ಪ್ರಾರಂಭಿಸಿದರೆ, ರಾತ್ರಿ ಪೊಲೀಸರು ಹೇಳಿದ ಸಮಯಕ್ಕೆ ನಾವು ಬಾರ್ ಬಂದ್ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಕೆಲವು ಸಿಬ್ಬಂದಿ. ಬೆಳಗ್ಗೆಯೇ ಅಂಗಡಿಗಳ ಕಸ ಹೊಡೆಯುವುದು, ಸ್ವಚ್ಛಗೊಳಿಸುವುದು, ಪೂಜೆ, ಸ್ಟಾಕ್ ಹೊಂದಾಣಿಕೆ ಮಾಡಿಕೊಳ್ಳುವುದು, ಸೇಲ್ಸ್ ಬಿಲ್ ಹೀಗೆ ಹಲವಾರು ಕೆಲಸ ಕಾರ್ಯಗಳಿಗಾಗಿ ಬಾರ್ ತೆರೆದಿರುತ್ತೇವೆ. ಆದರೆ ವ್ಯಾಪಾರ ನಡೆಸುವುದಿಲ್ಲ. ಈ ರೀತಿಯ ಪ್ರಕರಣಗಳ ಬಗ್ಗೆ ನಮ್ಮ ಸಂಘಟನೆಯಲ್ಲಿಯೂ ಚರ್ಚಿಸುತ್ತೇವೆ ಎಂದು ಗದಗ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಶಂಕರ ಹಾನಗಲ್ಲ ಹೇಳಿದರು.ಸರ್ಕಾರದ ನಿಯಮಗಳನ್ನು ಬಿಟ್ಟು ಬೆಳಗಿನ ಜಾವ ಮದ್ಯದ ಅಂಗಡಿ ತೆರೆದಿರುವ ಬಗ್ಗೆ ಈಗಾಗಲೇ ಇಲಾಖೆಗೆ ದೂರುಗಳು ಬಂದಿವೆ. ಈ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗದಗ ಅಬಕಾರಿ ಉಪಆಯುಕ್ತರಾದ ಲಕ್ಷ್ಮಿ ನಾಯಕ ಹೇಳುತ್ತಾರೆ.