ಸಾರಾಂಶ
- ದಾವಣಗೆರೆಯಲ್ಲಿ ಸವಾಲನ್ನೆಲ್ಲಾ ಪ್ರತಿಷ್ಠೆಯಾಗಿ ಸ್ವೀಕಾರ । ಗಾಯತ್ರಿ ಸಿದ್ದೇಶ್ವರ 2 ಲಕ್ಷ ಮತಗಳ ಅಂತರದಿಂದ ಗೆಲ್ತಾರೆಂದು ವಿಶ್ವಾಸ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಗೆಲ್ಲಿಸಲು ಇರುವ ಸವಾಲುಗಳನ್ನೆಲ್ಲಾ ನಾವು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದೇವೆ. ಹೆಚ್ಚು ಮತಗಳಿಂದ ನಮ್ಮ ಅಭ್ಯರ್ಥಿ ಗಾಯತ್ರಿ ಗೆಲುವು ದಾಖಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ನಗರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಬೃಹತ್ ರೋಡ್ ಶೋ, ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅಪಾರ ಸಂಖ್ಯೆಯ ಜನಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇಡೀ ಕ್ಷೇತ್ರದ ಜನರು ಬಿಜೆಪಿ ಅಭ್ಯರ್ಥಿ ಪರವಾಗಿದ್ದಾರೆ. ಭಾರೀ ಅಂತರದಲ್ಲಿ ಇಲ್ಲಿ ನಮ್ಮ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ. ಅಂತಹ ವಾತಾವರಣವೂ ರಾಜ್ಯದಲ್ಲಿ ಸೃಷ್ಟಿಯಾಗಿದೆ. ದಿನದಿನಕ್ಕೂ ಬಿಜೆಪಿ ಪರವಾಗಿರುವ ವಾತಾವರಣ ಸೃಷ್ಟಿಯಾಗಿದೆ. ಖಂಡಿತವಾಗಿಯೂ ನಾವು ಚುನಾವಣೆಯಲ್ಲಿ ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು.ನಾಮಪತ್ರ ಸಲ್ಲಿಸುವ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರ ಉತ್ಸಾಹ ನೋಡಿದರೆ, ಚುನಾವಣೆವರೆಗೂ ಇದೇ ಉತ್ಸಾಹ ಇರಬೇಕಾಗುತ್ತದೆ. ನೀವೆಲ್ಲರೂ ಮನೆ ಮನೆಗೆ ತೆರಳಿ, ಮತದಾರರಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮತ ನೀಡುವಂತೆ ಮನವಿ ಮಾಡಬೇಕು. ಬಿಜೆಪಿಯನ್ನು ಗೆಲ್ಲಿಸಲು ಕೆಲಸ ಮಾಡಿ, ಈ ಉತ್ಸಾಹ ಚುನಾವಣೆ ಮುಗಿಯುವವರೆಗೂ ಕಾಪಾಡಿಕೊಳ್ಳಿ. ಹಳ್ಳಿಹಳ್ಳಿಗೂ ತೆರಳಿ, ಮತದಾರರನ್ನು ಭೇಟಿ ಮಾಡಿ, ಬಿಜೆಪಿಗೆ ಹೆಚ್ಚು ಮತ ಬೀಳುವಂತೆ ಮಾಡಿ ಎಂಬುದಾಗಿ ಎಲ್ಲರಿಗೂ ಪ್ರಾರ್ಥನೆ ಮಾಡುವೆ ಎಂದು ಯಡಿಯೂರಪ್ಪ ಹೇಳಿದರು.
ಅನಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಸಲು ಜೊತೆಗೆ ತೆರಳಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿಗೆ ಶುಭಾರೈಸಿದರು. ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಕರೆದುಕೊಂಡು, ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸಬೇಕಿದ್ದ ಹಿನ್ನೆಲೆ ಅವಸರ ಅವಸರದಲ್ಲಿ ತೆರಳಿದರು.ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಎ.ಬಸವರಾಜ ಭೈರತಿ, ವಿಪ ಮುಖ್ಯ ಸಚೇತಕ ಎನ್.ರವಿಕುಮಾರ ಅವರು ಬಿ.ಎಸ್.ಯಡಿಯೂರಪ್ಪ ಜೊತೆಗಿದ್ದರು.
- - - ಟಾಪ್ ಕೋಟ್ದಾವಣಗೆರೆಯಲ್ಲಿ ನಿಮ್ಮೆಲ್ಲರ ಉತ್ಸಾಹ ನೋಡಿದರೆ, ಗಾಯತ್ರಿ ಸಿದ್ದೇಶ್ವರ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ನೀವೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರೂ ಚುನಾವಣೆ ಮುಗಿಯುವವರೆಗೂ ವಿಶ್ರಾಂತಿ ಪಡೆಯದೇ, ಕೆಲಸ ಮಾಡಿ. ಗಾಯತ್ರಿ ಸಿದ್ದೇಶ್ವರ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಿ, ಲೋಕಸಭೆಗೆ ಕಳಿಸಬೇಕು
- ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ- - - -19ಕೆಡಿವಿಜಿ4:
ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜೆ.ಸಿ. ಮಾಧುಸ್ವಾಮಿ, ಬಿ.ಎ. ಬಸವರಾಜ ಭೈರತಿ, ಎನ್.ರವಿಕುಮಾರ ಜೊತೆಗೂಡಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.