ಧಾರ್ಮಿಕ ಕಾರ್ಯಗಳಿಂದ ಸರ್ವರೂ ಒಗ್ಗೂಡಲು ಸಾಧ್ಯ: ದಿವಿನ್‌ರಾಜ್

| Published : Feb 29 2024, 02:05 AM IST

ಸಾರಾಂಶ

ಧಾರ್ಮಿಕ ಕಾರ್ಯಗಳ ಮೂಲಕ ಜಾತಿ, ಮತ, ವರ್ಗ ಬೇಧ ತೊರೆದು ಸರ್ವರೂ ಒಂದು ಗೂಡಲು ಸಾಧ್ಯವಿದೆ ಎಂದು ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಎ.ಜಿ.ದಿವಿನ್‌ರಾಜ್ ಹೇಳಿದರು.

ಬಲಮುರಿ ಗಣಪತಿ ದೇವಸ್ಥಾನದಲ್ಲಿ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಧಾರ್ಮಿಕ ಕಾರ್ಯಗಳ ಮೂಲಕ ಜಾತಿ, ಮತ, ವರ್ಗ ಬೇಧ ತೊರೆದು ಸರ್ವರೂ ಒಂದು ಗೂಡಲು ಸಾಧ್ಯವಿದೆ ಎಂದು ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಎ.ಜಿ.ದಿವಿನ್‌ರಾಜ್ ಹೇಳಿದರು.

ಪಟ್ಟಣದ ಜೇಸಿ ವೃತ್ತದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಚೈತನ್ಯ ಗೆಳೆಯರ ಬಳಗ ಬುಧವಾರ ಆಯೋಜಿಸಿದ್ದ ಬಾಳೆಹೊನ್ನೂರು ಭಕ್ತಿ ಸಂಭ್ರಮ ಸತ್ಯನಾರಾಯಣ ಪೂಜೆ ಮತ್ತು ದೀಪಾರಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಜತೆಗೆ, ನಮ್ಮ ಸುತ್ತಮುತ್ತಲಿನ ವಾತಾವರಣ ಸಾತ್ವಿಕವಾಗಿರಲಿದೆ. ಹಿಂದೂ ಬಾಂಧವರು ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳು ವುದರಿಂದ ಸನಾತನ ಸಂಸ್ಕೃತಿ, ಸಂಪ್ರದಾಯ ಉಳಿಯಲು ಸಾಧ್ಯ.

ಧಾರ್ಮಿಕ ಕಾರ್ಯಗಳೊಂದಿಗೆ ಪರಿಸರ ಸ್ವಚ್ಛತೆ ಕಡೆಗೂ ಆದ್ಯತೆ ನೀಡಬೇಕಿದ್ದು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಪರಿಸರ ಕಾಳಜಿ ಹೊಂದಬೇಕು. ಪರಿಸರ ಸ್ವಚ್ಛವಿದ್ದತೆ ನಮ್ಮ ಎಲ್ಲಾ ಚಟುವಟಿಕೆಗಳಿಗೂ ಪೂರಕ ಎಂದರು.

ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆದರೆ ಮಾತ್ರ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟ ಲೋಕ ಕಲ್ಯಾಣಾರ್ಥವಾಗಿ ಸತ್ಯನಾರಾಯಣ ವ್ರತ, ದೀಪಾರಾಧನೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕಾಫಿ ಬೆಳೆಗಾರ ಕೆ.ಕೆ.ವೆಂಕಟೇಶ್ ಮಾತನಾಡಿ, ಬಾಳೆಹೊನ್ನೂರು ಪಟ್ಟಣ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗಣೇಶೋತ್ಸವ, ದುರ್ಗಾ ಮಹೋತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ದೀಪಾರಾಧನೆಯಿಂದ ಮನಸ್ಸಿನ ಕತ್ತಲೆಗಳು ದೂರವಾಗಿ ಬದುಕು ಪ್ರಜ್ವಲಿಸಲಿದೆ. ಮನುಷ್ಯರಲ್ಲಿರುವ ಅಜ್ಞಾನ, ಅಂಧಕಾರ ಹೋಗಲಾಡಿಸಲು, ಮನಸ್ಸಿನ ಋಣಾತ್ಮಕ ಅಂಶಗಳನ್ನು ದೂರಗೊಳಿಸಲು ಸಾಧ್ಯವಾಗಲಿದೆ ಎಂದರು.

ಅರ್ಚಕ ಸುನೀಲ್ ಭಟ್, ಸದಾಶಿವ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು.ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ, ಒಳ್ಳೆಯ ಮನಸ್ಸು ಒಕ್ಕೂಟದ ಸಂಚಾಲಕ ಎಚ್.ಗೋಪಾಲ್, ಗಣಪತಿ ದೇವಸ್ಥಾನದ ಕಾರ್ಯದರ್ಶಿ ಎಂ.ಆರ್. ವೆಂಕಪ್ಪ ಗೌಡ, ಕಾಫಿ ಬೆಳೆಗಾರ ಟಿ.ಆರ್.ಯೋಗೇಂದ್ರ, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ, ದುರ್ಗಾದೇವಿ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞ ಪುರುಷ ಭಟ್, ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ಜೇಸಿಐ ಅಧ್ಯಕ್ಷ ಎನ್.ಶಶಿಧರ್, ಲಯನ್ಸ್ ಅಧ್ಯಕ್ಷ ಎಂ.ಡಿ.ಶಿವರಾಮ್, ವಕೀಲರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಚ್.ಕೃಷ್ಣಮೂರ್ತಿ, ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ, ಯಕ್ಷಗಾನ ಕಲಾ ಪ್ರತಿಷ್ಠಾನದ ಅಧ್ಯಕ್ಷ ಸುಧೀಂದ್ರ ಕಲಾಶ್ರೀ, ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಕಾಫಿ ಬೆಳೆಗಾರ ಡಿ.ಎನ್.ಜಗದೀಶ್, ಕೆ.ಎಂ.ರಾಘವೇಂದ್ರ, ಕೆ.ಪ್ರಶಾಂತ್‌ಕುಮಾರ್, ಸಿ.ವಿ.ಸುನೀಲ್ ಮತ್ತಿತರರು ಇದ್ದರು.ಇದೇ ಸಂದರ್ಭದಲ್ಲಿ ಸಂಸ್ಕೃತಿ ಶಾಲೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಭರತನಾಟ್ಯ ಕಲಾವಿದೆ ಹಿರಣ್ಯ ಉಮೇಶ್ ಭರತನಾಟ್ಯ ಪ್ರದರ್ಶಿಸಿದರು. ಗಾಯಕರಾದ ಕಿಶೋರ್ ಆಚಾರ್ಯ, ಪ್ರದೀಪ್, ಲೀಲಾ ರವಿಕುಮಾರ್, ಕಲಾವತಿ, ಪ್ರಕಾಶ್ ಆಚಾರ್ಯ ಭಕ್ತಿ ಸಂಗೀತ ನಡೆಸಿಕೊಟ್ಟರು.೨೨ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಭಕ್ತಿ ಸಂಭ್ರಮ ಸತ್ಯನಾರಾಯಣ ಪೂಜೆ, ದೀಪಾರಾಧನೆ ಕಾರ್ಯಕ್ರಮವನ್ನು ಕಾಫಿ ಮಂಡಳಿ ಸದಸ್ಯ ಎ.ಜಿ.ದಿವಿನ್‌ರಾಜ್ ಉದ್ಘಾಟಿಸಿದರು. ವೆಂಕಪ್ಪಗೌಡ, ಎಚ್.ಗೋಪಾಲ್, ಯೋಗೇಂದ್ರ, ವೆಂಕಟೇಶ್, ಚೈತನ್ಯ ವೆಂಕಿ ಇದ್ದರು.