ಲಲಿತಾಸಹಸ್ರನಾಮ ಪಾರಾಯಣದಿಂದ ಸಮಸ್ತ ದೋಷಗಳ ನಿವಾರಣೆ: ವಿದ್ವಾಂಸ ಪ್ರಸಾದ್

| Published : Aug 31 2025, 01:08 AM IST

ಸಾರಾಂಶ

ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದರಿಂದ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ. ನವ ಚೈತನ್ಯ ಪ್ರಾಪ್ತಿಯಾಗುವ ಜೊತೆಗೆ ದೇವಿಯ ಅನುಗ್ರಹವು ದೊರಕುತ್ತದೆ. ಮುಂದಿನ ದಿನಗಳಲ್ಲೂ ಸಹ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರತಿಯೊಬ್ಬರೂ ಲಲಿತಾ ಸಹಸ್ರ ನಾಮ ಪಾರಾಯಣ ಮಾಡುವುದರಿಂದ ಎಲ್ಲರಿಗೂ ಅವರ ಇಷ್ಟಾರ್ಥ ನೆರವೇರುವ ಜೊತೆಗೆ ಸಮಸ್ತ ದೋಷಗಳು ನಿವಾರಣೆ ಆಗಲಿದೆ ಎಂದು ಅಘೋರ ಅರ್ಚಕರು ಹಾಗೂ ವಿದ್ವಾಂಸ ಪ್ರಸಾದ್ ತಿಳಿಸಿದರು.

ಬೃಹನ್ಮಠದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ ದಿನನಿತ್ಯ ಪೂಜಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದರಿಂದ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ. ನವ ಚೈತನ್ಯ ಪ್ರಾಪ್ತಿಯಾಗುವ ಜೊತೆಗೆ ದೇವಿಯ ಅನುಗ್ರಹವು ದೊರಕುತ್ತದೆ. ಮುಂದಿನ ದಿನಗಳಲ್ಲೂ ಸಹ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದರು.

ಕಾರ್ಯಕ್ರಮದಲ್ಲಿ ಶ್ರೀಚಕ್ರಕ್ಕೆ ಹಾಲು, ಮೊಸರು, ತುಪ್ಪದೊಂದಿಗೆ ಪಂಚಾಮೃತ ಅಭಿಷೇಕಗಳನ್ನು ನಡೆಸಿ, ವಿಶೇಷವಾಗಿ ಪೂಜೆ ನಡೆಸಲಾಯಿತು. ಮುತ್ತೈದೆಯರು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಸಂಕಲ್ಪ ಮಾಡಿ ಲಲಿತಾ ಸಹಸ್ರ ನಾಮ ಪಠಿಸುತ್ತಾ ಕುಂಕುಮಾರ್ಚನೆಯೊಂದಿಗೆ ಪೂಜೆ ಸಲ್ಲಿಸಿದರು.

ಗೃಹಿಣಿ ಕವಿತಾ ಮಾತನಾಡಿ, ಬೃಹನ್ಮಠದಲ್ಲಿ ಲಲಿತಾ ಸಹಸ್ರನಾಮ ಹೇಳುತ್ತಾ ಪೂಜೆ ಸಲ್ಲಿಸುವ ಜೊತೆಗೆ ನಮ್ಮ ಮನೆಯಿಂದಲೇ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿ ದೇವರಿಗೆ ಕುಂಕುಮಾರ್ಚನೆ ಮಾಡಿರುವುದರಿಂದ ಕುಟುಂಬದ ಎಲ್ಲರಿಗೂ ಶುಭವಾಗಲಿದೆ ಎಂದರು.

ಮಹಾ ಮಂಗಳಾರತಿ ನಂತರ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ವೇಳೆ ಸ್ವರ್ಣ ಗೌರಿ ಭಕ್ತ ಮಂಡಳಿ ಎಚ್.ಎಂ.ಮಲ್ಲೇಶ, ನಾಗಣ್ಣ, ಕೆ.ಎಂ.ಎನ್.ನಾಗೇಂದ್ರ, ತೋಂಟದಾರ್ಯ ಜುವೆಲರ್ಸ್ ನ ನಾಗೇಂದ್ರ, ಅಶೋಕ, ಪ್ರವೀಣ, ಅಭಿ, ಅಕ್ಕಿ ಬಾಬು, ಟೈಲರ್ ನಾಗೇಂದ್ರ ಸೇರಿದಂತೆ ಇತರರು ಇದ್ದರು.