ಮಂಗಳೂರಿನಲ್ಲಿ ಐಟಿ ಹಬ್‌ ಸ್ಥಾಪನೆಗೆ ಸರ್ವಪ್ರಯತ್ನ: ಕ್ಯಾ.ಚೌಟ

| Published : Oct 02 2024, 01:14 AM IST

ಮಂಗಳೂರಿನಲ್ಲಿ ಐಟಿ ಹಬ್‌ ಸ್ಥಾಪನೆಗೆ ಸರ್ವಪ್ರಯತ್ನ: ಕ್ಯಾ.ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಐಟಿ ಕಂಪೆನಿಗಳ ಸ್ಥಾಪನೆಗೆ ಪೂರಕ ಎಲ್ಲ ವಾತಾವರಣ ಎಲ್ಲವೂ ಮಂಗಳೂರಿನಲ್ಲಿದೆ. ಉದ್ಯಮಗಳು ಬಂದಂತೆ ಹೊಟೇಲ್‌ಗಳು, ಇನ್ನಿತರ ವ್ಯಾಪಾರ ಚಟುವಟಿಕೆಗಳೂ ಹೆಚ್ಚಲಿವೆ ಎಂದು ಕ್ಯಾ.ಚೌಟ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಐಟಿ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟು ಐಟಿ ಹಬ್‌ ಸ್ಥಾಪನೆ ಮಾಡಲು ಬದ್ಧ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಮಂಗಳೂರು ಐಟಿ ಟಾಸ್ಕ್‌ ಫೋರ್ಸ್‌ ವತಿಯಿಂದ ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರನ್ನು ಐಟಿ ಹಬ್‌ ಮಾಡಲು ಬೇಕಾದ ಎಲ್ಲ ಮೂಲಸೌಲಭ್ಯ ಕಲ್ಪಿಸಿಕೊಡಲು ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ಸಚಿವರ ಜತೆ ಚರ್ಚೆ ಸಹಿತ ಹಲವು ಉಪಕ್ರಮಗಳನ್ನು ಆರಂಭಿಸಲಾಗಿದೆ. ಮುಂದೆ ಐಟಿಹಬ್‌ ಸ್ಥಾಪನೆಗೆ ಬೇಕಾದ ಸಾಧ್ಯತಾ ಯೋಜನೆಗಳನ್ನು ರೂಪಿಸುವ ಜತೆಗೆ ಉದ್ಯೋಗವಕಾಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಗಳೂರಿನಲ್ಲಿ ಈಗಾಗಲೆ ಇನ್ಫೋಸಿಸ್‌, ಟಿಸಿಎಸ್‌ ಕಂಪೆನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇನ್ನಷ್ಟು ಐಟಿ ಕಂಪೆನಿಗಳು ಬಂದರೆ ಸ್ಥಳೀಯ ಉದ್ಯೋಗವಕಾಶ ಹೆಚ್ಚಳಕ್ಕೂ ಪೂರಕ ಅವಕಾಶ ಸಿಗಲಿದೆ. ಐಟಿ ಕಂಪೆನಿಗಳ ಸ್ಥಾಪನೆಗೆ ಪೂರಕ ಎಲ್ಲ ವಾತಾವರಣ ಎಲ್ಲವೂ ಮಂಗಳೂರಿನಲ್ಲಿದೆ. ಉದ್ಯಮಗಳು ಬಂದಂತೆ ಹೊಟೇಲ್‌ಗಳು, ಇನ್ನಿತರ ವ್ಯಾಪಾರ ಚಟುವಟಿಕೆಗಳೂ ಹೆಚ್ಚಲಿವೆ ಎಂದು ಕ್ಯಾ.ಚೌಟ ಹೇಳಿದರು.

ಬಿ.ಸಿ.ರೋಡ್‌- ಅಡ್ಡಹೊಳೆ ಹೆದ್ದಾರಿ ಕಾಮಗಾರಿಯನ್ನು ಮುಂದಿನ ವರ್ಷ ಮಾರ್ಚ್‌ಗೆ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಶಿರಾಡಿ ಬಳಿಕ ಮಾರನಹಳ್ಳಿ ತನಕ ಹೆದ್ದಾರಿ ಕಾಮಗಾರಿ ಆಗಬೇಕಿದೆ. ಶಿರಾಡಿ ಘಾಟಿಯಲ್ಲಿ ಮಂಗಳೂರು- ಬೆಂಗಳೂರು ರೈಲು, ಬಸ್‌ ಸಂಪರ್ಕಕ್ಕಾಗಿ ಪ್ರತ್ಯೇಕ ಲೈನ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಮಂಗಳೂರಿನಿಂದ ಮುಂಬೈ ಮತ್ತಿತರ ಕಡೆಗೆ ವಿಮಾನ ಸಂಪರ್ಕ ಹೆಚ್ಚಳ, ಮಂಗಳೂರು ರನ್‌ವೇ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಪ್ರವೀಣ್‌ ಕಲ್ಬಾವಿ ಸಂವಾದ ನಡೆಸಿಕೊಟ್ಟರು. ಮೊಹಮ್ಮದ್‌ ಹನೀಫ್‌ ಸ್ವಾಗತಿಸಿದರು. ಅಶಿತ್‌ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶೀರ್‌ ಶೆಟ್ಟಿ ನಿರೂಪಿಸಿದರು. ಸುಬೋಧ್‌ ವಂದಿಸಿದರು.