ಎಲ್ಲ ರೈತರು ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಿ

| Published : Jun 10 2024, 12:52 AM IST

ಸಾರಾಂಶ

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ ಕುರಿತು ರೈತ ಸಂಘದ ಮುಖಂಡರುಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ ಕುರಿತು ರೈತ ಸಂಘದ ಮುಖಂಡರುಗಳ ಸಭೆ ನಡೆಯಿತು.

ಮಧುಗಿರಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ. ಚಂದ್ರಕುಮಾರ್ ಎಚ್. ಎಲ್. ಮಾತನಾಡಿ, 2023-24 ನೇ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 6572 ರೈತರು ಬೆಳೆ ವಿಮೆಗೆ ಯೋಜನೆಯಡಿ ನೋಂದಾಯಿಸಿದ್ದಾರೆ. ಕಳೆದ ವರ್ಷ ಬರಗಾಲ ಘೋಷಣೆಯಾದ ಪ್ರಯುಕ್ತ ತಾಲೂಕಿಗೆ ಒಟ್ಟು 1164 ಲಕ್ಷ ರು. ಬೆಳೆ ವಿಮೆ ಹಣ ರೈತರಿಗೆ ಸಂದಾಯವಾಗಿದೆ. 2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ರೈತ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು,2024ರ ಮುಂಗಾರು ಹಂಗಾಮಿನಲ್ಲಿ ಆನೆಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆಯಿಂದ ಉಂಟಾಗುವ ನಷ್ಟ ಪರಿಹಾರವನ್ನು ನೀಡಲಾಗುವುದು. ರೈತರು ಸಂಬಂಧಪಟ್ಟ ಸ್ಥಳೀಯ ವಾಣಿಜ್ಯ, ಗ್ರಾಮೀಣ, ಸಹಕಾರ ಬ್ಯಾಂಕ್‌ಗಳ ಮೂಲಕ ನಿರ್ದಿಷ್ಟವಾದ ಅರ್ಜಿಯೊಂದಿಗೆ ಹಾಗೂ ಬೆಳೆ ಸಾಲ ಪಡೆಯದ ರೈತರು ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಕಂದಾಯ ರಶೀದಿ ನೀಡಿ ಘೋಷಣೆ ಸಲ್ಲಿಸಿ ಕಂತು ಪಾವತಿಸಬೇಕು ಎಂದು ಹೇಳಿದರು.

ಒಂದೊಂದು ಬೆಳೆಗೂ ಬೇರೆ ಬೇರೆ ವಿಮಾ ಕಂತುಗಳು ಹಾಗೂ ವಿಮೆ ಕಟ್ಟಲು ಬೇರೆ ಬೇರೆ ದಿನಾಂಕ ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಕೃಷಿ ಇಲಾಖೆಯ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ, ಸಂಪರ್ಕಿಸಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಮಂಜುನಾಥ್ ಕೆ ಮಾತನಾಡಿ, ತಾಲೂಕಿನ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಸಭೆ ಕರೆದು ರೈತರ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಲಾಗುವುದು. ರೈತರಿಗೆ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ತಾಲೂಕು ಆಡಳಿತ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ರೈತ ಸಂಘದ ಮುಖಂಡರಿಗೆ ಭರವಸೆ ನೀಡಿದರು.

ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಅನಂತರಾಮ್, ಸಹಾಯಕ ಕೃಷಿ ನಿರ್ದೇಶಕ ಎಂ,ಆರ್ ರುದ್ರಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು, ಧನಂಜಯ ಆರಾಧ್ಯ, ಶಬೀರ್ ಬಾಷ ಹಾಜರಿದ್ದರು