ಗೌಡನಕಟ್ಟೆಯ ಪ್ರಕಾಶ್ ಜೋಳದ ಹೊಲದಲ್ಲಿ ನ. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು.
ಕನ್ನಡಪ್ರಭ ವಾರ್ತೆ ಮೈಸೂರುಹುಣಸೂರು ತಾಲೂಕು ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿಮರಿಗಳು ಮೃತಪಟ್ಟಿವೆ. ಇವುಗಳನ್ನು ಕೂರ್ಗಳ್ಳಿ ಬಳಿಯ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿತ್ತು. ನಾಲ್ಕು ದಿನಗಳ ಅಂತರದಲ್ಲಿ ಈ ನಾಲ್ಕೂ ಮರಿಗಳು ಮೃತಪಟ್ಟಿದ್ದು, ಕಾರಣ ತಿಳಿದುಬಂದಿಲ್ಲ.ಗೌಡನಕಟ್ಟೆಯ ಪ್ರಕಾಶ್ ಜೋಳದ ಹೊಲದಲ್ಲಿ ನ. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು. ಮದ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ಅಂದರೆ ನ. 30 ರಂದು ನಾಲ್ಕು ಹುಲಿಮರಿಗಳು ಪತ್ತೆಯಾಗಿದ್ದವು. ಹುಲಿ ಮರಿಗಳು ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಗಾಬರಿಯಾಗಿದ್ದವು.ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು. ಆಹಾರವಿಲ್ಲದೆ ಬಳಲಿದ್ದವು. ಜನರ ಕೂಗಾಟದಿಂದ ಅತ್ತಿಂದಿತ್ತ ಓಡಾಡಿ ಸೆರೆ ಹಿಡಿಯುವ ವೇಳೆ ನಿತ್ರಾಣಗೊಂಡಿದ್ದವು. ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗಾಬರಿಗೊಳಗಾಗಿದ್ದ ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಈಗ ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಮೃತಪಟ್ಟಿವೆ.ಪಶುವೈದ್ಯರು ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆದರೆ ತಾಯಿ ಹುಲಿ ಆರೋಗ್ಯವಾಗಿದೆ. ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಹುಲಿ ಮರಿಗಳ ಸಾವಿನ ಬಗ್ಗೆ ಆರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡಿರಲಿಲ್ಲ.