ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗೌರವಯುತವಾಗಿ ಬಾಳ್ವೆ ನಡೆಸಲು ಬೇಕಾದ ಎಲ್ಲ ಸವಲತ್ತುಗಳನ್ನು ಆದ್ಯತೆ ಮೇರೆಗೆ ಒದಗಿಸುತ್ತಾ ಬಂದಿದೆ ಎಂದು ವಿರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ವಿರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ 18 ಗ್ರಾಪಂ ವ್ಯಾಪ್ತಿಯಲ್ಲಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ನೂತನ ಮನೆ ನಿರ್ಮಾಣ ಕಾಮಗಾರಿ ಆದೇಶ ಪ್ರತಿ ವಿತರಣಾ ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ನಿವೇಶನ ಮತ್ತು ವಸತಿ ರಹಿತರಿಗೆ ವಸತಿ ನೀಡುವುದು ಸರ್ಕಾರದ ಕರ್ತವ್ಯ. ಹಲವು ವರ್ಷಗಳಿಂದ ಸರ್ಕಾರದಿಂದ ಮನೆ ನಿರ್ಮಿಸಬೇಕು, ನಿವೇಶನ ರಹಿತರು, ವಸತಿ ರಹಿತರಿಗೆ ಆದ್ಯತೆ ಮೇರೆಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಹಲವಾರು ಜನಪರ ಯೋಜನೆಗಳೊಂದಿಗೆ ವಸತಿ ನೀಡುವ ಯೋಜನೆಗೂ ಮಹತ್ವ ನೀಡಿದೆ ಎಂದು ಶಾಸಕರು ಹೇಳಿದರು. ಅಂದಿನ ವಸತಿ ಸಚಿವರಾದ ಜಮೀರ್ ಅಹಮ್ಮದ್ ಅವರು ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಸಂಪುಟಗಳ ಸದಸ್ಯರ ಸಹಕಾರದಿಂದ ಜಿಲ್ಲೆಗೆ ಮನೆ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದು ಪೊನ್ನಣ್ಣ ವಿವರಿಸಿದರು. ಮಳೆಗಾಲ ಪ್ರಾರಂಭಕ್ಕೂ ಮೊದಲು ಮನೆ ಹಸ್ತಾಂತರ ಮಾಡುವ ಯೋಜನೆ ಇದ್ದು, ಜನರು ಇದರ ಸದುಪಯೋಗ ಪಡೆದುಕೊಂಡು, ತಮ್ಮ ಅನುಕೂಲಕ್ಕನುಸಾರ ಮನೆ ನಿರ್ಮಿಸಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಶಾಸಕರು ಹಾರೈಸಿದರು. ಮಡಿಕೇರಿ ತಾಲೂಕು ಪಂಚಾಯಿತಿ ಇ.ಒ ಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಸೂರು ಒದಗಿಸುವಲ್ಲಿ ಪೊನ್ನಣ್ಣ ಅವರ ನೇತೃತ್ವದಲ್ಲಿ ಜಿಲ್ಲೆಗೆ 1200 ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರು ಮಾಡಿರುವುದು ಶ್ಲಾಘನೀಯ ಎಂದರು. ವಿರಾಜಪೇಟೆ ಕ್ಷೇತ್ರ ಭೌಗೋಳಿಕವಾಗಿ ಹೆಚ್ಚಿನ ವಿಸ್ತೀರ್ಣ ಹೊಂದಿರುವುದರಿಂದ ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿಗೆ 527 ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ವಿರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪೆರಾಜೆ, ಚೆಂಬು, ಸಂಪಾಜೆ, ಮದೆ, ಬೆಟ್ಟಗೇರಿ, ಚೇರಂಬಾಣೆ, ಕುಂದಚೇರಿ ಭಾಗಮಂಡಲ, ಕರಿಕೆ, ಅಯ್ಯಂಗೇರಿ, ಬಲ್ಲಮಾವಟಿ, ಎಮ್ಮೆಮಾಡು ನಾಪೋಕ್ಲು, ಕುಂಜಿಲ-ಕಕ್ಕಬ್ಬೆ, ನರಿಯಂದಡ, ಹಾಕತ್ತೂರು, ಮೇಕೇರಿ, ಕೊಣಂಜಗೇರಿ ಗ್ರಾ.ಪಂ.ವ್ಯಾಪ್ತಿಯ 427 ಅರ್ಹ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ಸಂಬಂಧ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಮನೆ ನಿರ್ಮಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಮಡಿಕೇರಿ ತಾಲೂಕು ಅಭಿವೃದ್ಧಿ ಮತ್ತು ಯೋಜನೆಗಳ ಸಮಿತಿ ಉಪಾಧ್ಯಕ್ಷ ಬಾಲಚಂದ್ರ ನಾಯರ್, ಕೊಡಗು ಜಿಪಂ ಯೋಜನೆ ನಿರ್ದೇಶಕ ಜೀವನ್ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷರಾದ ರಫೀಕ್, ಕಕ್ಕಬೆ ಗ್ರಾಪಂ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಚೆಟ್ಟಿಮನಿ ಪಂಚಾಯಿತಿ ಮಾಜಿ ಸದಸ್ಯರಾದ ಹ್ಯಾರೀಶ್, ಮೇಕೇರಿ ಪಂಚಾಯಿತಿ ಮಾಜಿ ಸದಸ್ಯರಾದ ಹನೀಫ್, ಪ್ರಮುಖರಾದ ಸೂರಜ್ ಹೊಸೂರು, ಕೋಡಿರ ವಿನೋದ್ ನಾಣಯ್ಯ, ರವೀಂದ್ರ, ಪಿ.ಎಲ್. ಸುರೇಶ್, ತುಳಸಿ ಗಾಂಧಿ ಪ್ರಸಾದ್, ಮಡಿಕೇರಿ ತಾಲೂಕಿನ ಎಲ್ಲ ಪಂಚಾಯಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಫಲಾನುಭವಿಗಳಿದ್ದರು.ಬಡವರಿಗೆ ಸಕಲ ಸರ್ಕಾರಿ ಸವಲತ್ತು: ಪೊನ್ನಣ್ಣ ಭರವಸೆ
ಕರ್ನಾಟಕ ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗೌರವಯುತವಾಗಿ ಬಾಳ್ವೆ ನಡೆಸಲು ಬೇಕಾದ ಎಲ್ಲ ಸವಲತ್ತುಗಳನ್ನು ಆದ್ಯತೆ ಮೇರೆಗೆ ಒದಗಿಸುತ್ತಾ ಬಂದಿದೆ ಎಂದು ವಿರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.