ಸಾರಾಂಶ
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ದೇಶದ ಹಿಂದು ಮುಸ್ಲಿಂ ಎಲ್ಲರೂ ಒಂದೇ, ಎಲ್ಲರ ರಕ್ತದ ಬಣ್ಣವೂ ಒಂದೇ. ನಾವೆಲ್ಲರೂ ಪರಸ್ಪರ ಸಹೋದರರಂತೆ ಇರಬೇಕಿದೆ ಎಂದು ಸಾದಿಯಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಹಮದ್ ಹುಸೇನ್ ಹಾಫೀಜ್ ಕರ್ನಾಟಕಿ ಹೇಳಿದರು.ಪಟ್ಟಣದಲ್ಲಿ ಶನಿವಾರ ಸಾದಿಯಾ ಎಜುಕೇಶನಲ್ ಟ್ರಸ್ಟ್, ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ನಡೆದ ಸಾರ್ವಜನಿಕ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೆಲ್ಲ ಒಂದೇ ಎಂದು ಮಾಡುವ ರಕ್ತದಾನ ಶ್ರೇಷ್ಠವಾದುದು. ಶ್ರೇಷ್ಠದಾನ ಎಂದು ತಿಳಿದು ರಕ್ತದಾನ ಮಾಡಬೇಕು. ನಾವು ದೇಶ ಕಟ್ಟಬೇಕೇ ಹೊರತು, ತುಂಡು ಮಾಡಬಾರದು. ನಾವೆಲ್ಲ ಪರಸ್ಪರ ಸಹೋದರರಂತೆ ಇರಬೇಕಾಗಿದೆ ಎಂದು ತಿಳಿಸಿದರು.
ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟ. ನಾವೆಲ್ಲರೂ ಮನುಷ್ಯತ್ವವನ್ನು ಗೌರವಿಸಬೇಕು. ನಮ್ಮ ಮದರಸಾಗಳು ಸಮಾಜಮುಖಿ ಕೆಲಸ ಮಾಡಬೇಕಿದ್ದು, ಇದರ ಭಾಗವಾಗಿ ಸಾದಿಯಾ ಎಜುಕೇಶನ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿದೆ ಎಂದರು.ನಮ್ಮ ಪ್ರವಾದಿಗಳು ಜಾತಿ ಯಾವುದೆಂದು ಪರಿಗಣಿಸದೇ ಸಹಾಯ ಮಾಡಬೇಕು ಎಂದಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಅವರು ಉತ್ತಮ ಶ್ರೇಣಿಯಲ್ಲಿ ಅಂಕ ಗಳಿಸಿ, ಪಾಸಾದಾಗ ಮೊದಲಿಗೆ ಸಂತೋಷ ಪಡುವವಳು ತಾಯಿ. ಅವಳು ನಮ್ಮನ್ನು ಹೆತ್ತು ಹೊತ್ತು, ಏನೇ ಸಮಸ್ಯೆ ಬಂದಾಗ ನಿಲ್ಲುವವಳು ತಾಯಿ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಪೋಷಕರಿಗೆ ಹೆಸರು ತರುವಂತಹ ಕಾರ್ಯ ಮಾಡಬೇಕು ಎಂದರು.
ಪುರಸಭೆ ಸದಸ್ಯ ಟಿ.ರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಜನಪ್ರತಿನಿಧಿ ಆದವನು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಜನ ನಮ್ಮ ಕೆಲಸ ಕಾರ್ಯಗಳನ್ನು ನೋಡುತ್ತಿರು ತ್ತಾರೆ, ನಾವು ಅಧಿಕಾರದಲ್ಲಿ ಇದ್ದಾಗ ಒಳ್ಳೆಯ ಸೇವೆಯನ್ನೇ ಮಾಡಬೇಕು ಎಂದು ತಿಳಿಸಿದರು.ಪಟ್ಟಣದ ಜನತೆ 5 ಬಾರಿ ನನ್ನನ್ನು ಚುನಾಯಿಸಿದ್ದಾರೆ. ಈ ಸಂಸ್ಥೆ ಪದಾದಿಕಾರಿಗಳು ಪುರಸಭೆಗೆ ಬಂದು ಸಾದಿಯಾ ಎಜುಕೇಶನಲ್ ಟ್ರಸ್ಟ್‌ಗೆ 2 ಎಕರೆ ಭೂಮಿ ಬೇಕು ಎಂದಾಗ, ಸಂಸದ ರಾಘಣ್ಣ ಅವರ ಸಹಕಾರದಿಂದ ಕೊಡಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಚ್ಚುರಾಯಪ್ಪ, ಮಹಮದ್ ಆಸೀಫ್ ಮಾತನಾಡಿದರು. ಸಂತೋಷ್, ಸಿಕಂದರ್ ಬಾಷಾ, ಪರ್ವೀಜ್ ಅಹಮದ್, ಸಯ್ಯದ್ ಅತೀಕ್ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.- - - -29ಕೆಎಸ್‌ಎಚ್‌ಆರ್1:
ಸಾದಿಯಾ ಎಜುಕೇಶನ್ ಟ್ರಸ್ಟ್ ಮದರಸದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಹಮದ್ ಹುಸೇನ್ ಮಾತನಾಡಿದರು.