ಇಷ್ಟಲಿಂಗ ಧರಿಸಿ ಪೂಜಿಸಿದರೆ ಶ್ರೇಯಸ್ಸು, ಯಶಸ್ಸು ಲಭ್ಯ: ಡಾ.ಪಂಡಿತಾರಾಧ್ಯ ಸ್ವಾಮೀಜಿ

| Published : Jan 30 2024, 02:04 AM IST

ಇಷ್ಟಲಿಂಗ ಧರಿಸಿ ಪೂಜಿಸಿದರೆ ಶ್ರೇಯಸ್ಸು, ಯಶಸ್ಸು ಲಭ್ಯ: ಡಾ.ಪಂಡಿತಾರಾಧ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ತಾಯಂದಿರು ಮೌಢ್ಯಕ್ಕೆ ಹೆಚ್ಚು ತುತ್ತಾಗಿರುವುದು ದುರಂತವಾಗಿದ್ದು, ಬಸವ ತತ್ವದಲ್ಲಿ ವೈದಿಕ ಆಚರಣೆಗೆ ಆವಕಾಶವಿಲ್ಲ ಕಾಯಕ ಮತ್ತು ದಾಸೋಹಕ್ಕೆ ಮಹತ್ವವಿದ್ದು ಅದನ್ನು ಪ್ರತಿಯೊಬ್ಬ ಬಸವ ತತ್ವ ಅನುಯಾಯಿಗಳು ಅನುಸರಿಸಿಕೊಂಡು ಹೋಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರ ಜೀವನದ ಅರ್ಥಿಕ ಸ್ಥಿತಿ ಸದೃಢವಾಗಿದ್ದು ನೈತಿಕ ಮೌಲ್ಯ ಕುಸಿದು ಹೋಗಿದೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಬಸವತತ್ವ ಅನುಯಾಯಿಗಳಾದ ನಾವು ಹಣೆ ಮೇಲೆ ವಿಭೂತಿ, ಕೊರಳಲ್ಲಿ ಇಷ್ಟಲಿಂಗ ಧರಿಸಿ ಪೂಜೆ ಮಾಡಿ ದಿನಕ್ಕೆ ನಾಲ್ಕು ವಚನಗಳ ವಾಚಿಸಿ ಅದರಂತೆ ಮುನ್ನಡೆದಾಗ ಶ್ರೇಯಸ್ಸು-ಯಶಸ್ಸು ಲಭಿಸಲಿದೆ ಎಂದು ಸಾಣೇಹಳ್ಳಿ ಮಠದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಯರಗಟ್ಟಿಹಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ ಇಂದು ತಾಯಂದಿರು ಮೌಢ್ಯಕ್ಕೆ ಹೆಚ್ಚು ತುತ್ತಾಗಿರುವುದು ದುರಂತವಾಗಿದ್ದು, ಬಸವ ತತ್ವದಲ್ಲಿ ವೈದಿಕ ಆಚರಣೆಗೆ ಆವಕಾಶವಿಲ್ಲ ಕಾಯಕ ಮತ್ತು ದಾಸೋಹಕ್ಕೆ ಮಹತ್ವವಿದ್ದು ಅದನ್ನು ಪ್ರತಿಯೊಬ್ಬ ಬಸವ ತತ್ವ ಅನುಯಾಯಿಗಳು ಅನುಸರಿಸಿಕೊಂಡು ಹೋಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರ ಜೀವನದ ಅರ್ಥಿಕ ಸ್ಥಿತಿ ಸದೃಢವಾಗಿದ್ದು ನೈತಿಕ ಮೌಲ್ಯ ಕುಸಿದು ಹೋಗಿದೆ. ಗುರು-ಹಿರಿಯರು ಕೊಟ್ಟ ಸಂಸ್ಕಾರ ಮತ್ತು ಸಂಸ್ಕೃತಿ ನಾವು ಅನುಸರಿಸಿ ಮುಂದಿನ ಪೀಳಿಗೆಗೆ ಕೊಡಬೇಕು ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ತಾಲೂಕಿನಲ್ಲಿ ಬರಗಾಲ ವ್ಯಾಪಿಸುತ್ತಿದ್ದು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾಗಿದ್ದು ನಂತರ ತೋಟಗಳಿಗೆ ಅವಶ್ಯಕತೆಗೆ ತಕ್ಕಷ್ಟು ನೀರು ಬಳಸಬೇಕು. ನನ್ನ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ₹88 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಗೆ ಅನುದಾನ ನೀಡಿದ್ದು ಸಾರ್ಥಕವಾಗಿದೆ. ಇಂತಹ ಬರಗಾಲದ ಸಂಕಷ್ಟದ ಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ಮತ್ತು ಗುರುಗಳ ಆರ್ಶೀವಾದ ನಮ್ಮ ಶ್ರೇಯಸ್ಸಿಗೆ ಅತಿ ಮುಖ್ಯವಾಗಿದೆ ಎಂದರು.

ತಾಲೂಕು ಕಾಂಗ್ರೆಸ್‌ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ ಗ್ರಾಮೀಣ ಭಾಗದ ಕುಟುಂಬಗಳ ಸಂಸ್ಕಾರ ಮತ್ತು ಸಂಸ್ಕೃತಿ ಮಾದರಿಯಾಗಿದ್ದು ಮನುಷ್ಯ ಆಸೆ ಜೀವಿಯಾಗುವ ಬದಲು ಆಶಾಜೀವಿಯಾಗಿ ಆರ್ಥಪೂರ್ಣವಾಗಿ ಬದುಕಿನ ಜೀವನ ಸಾಗಿಸಿದಾಗ ಜೀವನ ಸಾರ್ಥಕತೆ ಪಡೆಯುವುದು ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಎಂ.ಬಿ.ನಾಗರಾಜ್, ನಿವೃತ್ತ ಪ್ರಾಚಾರ್ಯ ಚಂದ್ರಶೇಖರಪ್ಪ, ಪ್ರಮುಖರಾದ ರಂಗನಾಥ್, ಯೋಗರಾಜ್, ಶ್ರೀಧರ್, ಜಿ.ಆರ್.ಲೋಕೇಶ್ವರಪ್ಪ, ಬಸವರಾಜಪ್ಪ, ನವೀನ್, ದಿವಾಕರ್, ಉಮೇಶ್, ಅಮಾನುಲ್ಲಾಖಾನ್, ಚಂದ್ರಪ್ಪ, ವೀರಭದ್ರಪ್ಪ ಉಪಸ್ಥಿತರಿದ್ದರು.