ವರ್ಷಾಂತ್ಯಕ್ಕೆ ಹೊಳಲ್ಕೆರೆ ಎಲ್ಲ ಕೆರೆಗಳಿಗೆ ಭದ್ರೆ ನೀರು

| Published : May 21 2025, 02:11 AM IST

ವರ್ಷಾಂತ್ಯಕ್ಕೆ ಹೊಳಲ್ಕೆರೆ ಎಲ್ಲ ಕೆರೆಗಳಿಗೆ ಭದ್ರೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದಲ್ಲಿ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಮುಂಬರುವ ಡಿಸೆಂಬರ್ ಅಂತ್ಯದ ಒಳಗಾಗಿ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹಾಯಿಸಿ ಭರ್ತಿ ಮಾಡಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.

ತಾಲೂಕಿನ ಕೆಂಚಾಪುರ ಗ್ರಾಮದಲ್ಲಿ ಮಂಗಳವಾರ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೊಳಲ್ಕೆರೆ ತಾಲೂಕಿಗೆ ಭದ್ರೆ ನೀರು ಹರಿಸಲು ಎದುರಾಗಿದ್ದ ಅಡೆ ತಡೆಗಳು ಬಹುತೇಕ ನಿವಾರಣೆ ಆಗಿವೆ. ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣದ ಕಾಮಗಾರಿಯಲ್ಲಿ ಒಂದಿಷ್ಟು ಬಾಕಿ ಇದ್ದು ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.

ಸರ್ಕಾರ ಬರುತ್ತವೆ, ಹೋಗುತ್ತವೆ. ಅಧಿಕಾರ ಎಂದಿಗೂ ಶಾಶ್ವತವಲ್ಲ. ಇರುವಷ್ಟು ದಿನ ಬಡವರು, ರೈತರು, ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವುದು ರಾಜಕಾರಣಿ ಕರ್ತವ್ಯ. ನಮ್ಮನ್ನು ಆಯ್ಕೆ ಮಾಡಿದ ಮತದಾರರ ಸಮಸ್ಯೆಗಳ ಈಡೇರಿಸಬೇಕಿದೆ. ಗ್ರಾಮೀಣ ಪ್ರದೇಶನ ಜನರ ಬದುಕಿಗೆ ಸ್ಪಷ್ಟ ದಿಕ್ಕು ತೋರಿಸಬೇಕು. ಇನ್ನೊಂದು ವರ್ಷದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸುತ್ತೇನೆ. ಇದರಿಂದಾಗಿ ರೈತರ ವಿದ್ಯುತ್ ಭವಣೆ ನೀಗಲಿದೆ. ಜಿಲ್ಲೆಯಲ್ಲಿಯೇ ಇಲ್ಲದಂತ ದೊಡ್ಡ ವಿದ್ಯುತ್ ಪವರ್ ಸ್ಟೇಷನ್ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದುನೂರು ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಜೋಗ್‍ಫಾಲ್ಸ್ ನಿಂದ ನೇರವಾಗಿ ಇಲ್ಲಿಗೆ ಪೂರೈಕೆಯಾಗಲಿರುವ ವಿದ್ಯುತ್‍ನ್ನು ತಾಲೂಕಿನಾದ್ಯಂತ ಎಲ್ಲಾ ಕಡೆ ಸರಬರಾಜು ಮಾಡಲಾಗುವುದು. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರ ಕೃಷಿ ಪಂಪುಸೆಟ್ಟುಗಳಿಗೆ ವಿದ್ಯುತ್ ಭವಣೆ ನೀಗಲಿದೆ ಎಂದರು.

ಹಿರಿಯೂರಿನ ವಾಣಿವಿಲಾಸಸಾಗರದಿಂದ ಹೊಳಲ್ಕೆರೆ ತಾಲೂಕಿನ ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡವ ಕಾರ್ಯ ನಡೆದಿದೆ. ವಿವಿ ಸಾಗರದ ಮಧ್ಯೆ ನೀರಿನಲ್ಲಿ ಪಿಲ್ಲರ್ ನಿರ್ಮಿಸಿ, ಅಲ್ಲೊಂದು ಕಟ್ಟೆ ಕಟ್ಟಿ ಮೋಟಾರ್ ಕೂರಿಸಿ ನೀರು ಮೇಲೆತ್ತಲಾಗುತ್ತದೆ. ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆಗೆ 367 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಕ್ಷೇತ್ರಾದ್ಯಂತ ಎಲ್ಲಿಯೂ ಇಂತಹ ಕೆಲಸ ಆಗಿಲ್ಲವೆಂದು ಯಾರು ಹೇಳುವಂತಿಲ್ಲ. ಎಲ್ಲೆಲ್ಲಿ ಏನೇನು ಅಭಿವೃದ್ದಿ ಕೆಲಸಗಳಾಗಬೇಕೆಂಬುದನ್ನು ಹುಡುಕಿ ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಹಣ ತರುವ ಯೋಗ್ಯತೆಯಿಟ್ಟುಕೊಂಡಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಕೆ.ಸಿ.ಮಹೇಶ್ವರಪ್ಪ, ಕುಮಾರಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಲ್ಲಿಕಾರ್ಜುನ್, ಧನಂಜಯ, ಆನಂದ್, ಸುಭಾಷ್ ಮೂರ್ತಿನಾಯ್ಕ, ಕುಮಾರ್ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.