ಸಂವಿಧಾನ ಕೇವಲ ಒಂದು ಕಾನೂನಿನ ದಾಖಲೆಯಲ್ಲ, ಇದೊಂದು ಮಹತ್ವದ ದಾಖಲೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಹಾಗೆ ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಗುರುರಾಜ್‌ ಸೋಮಕ್ಕಳವರ್‌ ತಿಳಿಸಿದರು.ಅಖಿಲ ಭಾರತೀಯ ಅಧಿವಕ್ತ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತ್ಯ, ಮೈಸೂರು ಘಟಕ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ ಮತ್ತು ಯಂಗ್‌ ಇಂಡಿಯನ್ಸ್‌ ಸಂಯುಕ್ತ ಆಶ್ರಯದಲ್ಲಿ 76ನೇ ಸಂವಿಧಾನ ದಿನಾಚರಣೆ ಹಾಗೂ ವಕೀಲರ ದಿನಾಚರಣೆ ಮತ್ತು 2025ನೇ ಸಾಲಿನ ಪ್ರ-ಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ಸಂವಿಧಾನವನ್ನು ಪೂಜಿಸಬೇಕು ಮತ್ತು ರಕ್ಷಿಸಬೇಕು ಆಗ ಮಾತ್ರ ನಾವು ಸುಭದ್ರವಾಗಿರುತ್ತೇವೆ. ಪ್ರತಿಯೊಬ್ಬ ಭಾರತೀಯ ಪ್ರಜೆಯು ಸಂವಿಧಾನ ದಿನಾಚರಣೆಯನ್ನು ಸಂತೋಷದಿಂದ ಆಚರಿಸಬೇಕು. ಸಂವಿಧಾನ ಕೇವಲ ಒಂದು ಕಾನೂನಿನ ದಾಖಲೆಯಲ್ಲ, ಇದೊಂದು ಮಹತ್ವದ ದಾಖಲೆಯಾಗಿದೆ. ಸುಮಾರು 2 ವರ್ಷಗಳ ಕಾಲ ನಮ್ಮ ಹಿರಿಯರು ಈ ಸಂವಿಧಾನವನ್ನು ಸಮರ್ಪಣೆ ಮಾಡಲು ಆಳವಾಗಿ ಅಧ್ಯಯನ ಮಾಡಿ ಚರ್ಚಿಸಿ ನಮಗೆ ಸಮರ್ಪಣೆ ಮಾಡಿದ ಮಹತ್ವದ ಗ್ರಂಥ ಎಂದರು.ಇದನ್ನು ಸಿದ್ಧಪಡಿಸುವಾಗ ಪ್ರಪಂಚದ ಅನೇಕ ಸಂವಿಧಾನವನ್ನು ಅಧ್ಯಯನ ಮಾಡಿ ಅದರಲ್ಲಿ ಇದ್ದ ಪ್ರಮುಖ ಮತ್ತು ಉತ್ತಮವಾದ ಹಾಗೂ ನಮ್ಮ ಭಾರತಕ್ಕೆ ಸೂಕ್ತವಾಗುವಂತ ಅಂಶಗಳನ್ನು ಅಳವಡಿಸಿ ನಮಗೆ ಕೊಡುಗೆಯಾಗಿ ನೀಡಿರುತ್ತಾರೆ. ಇದನ್ನು ಸಿದ್ಧಪಡಿಸಲು ಸುಮಾರು 13 ವಿವಿಧ ಸಗತಿಗಳನ್ನು ರಚಿಸಿದ್ದಾರೆ ಇದರಲ್ಲಿ 7 ಸದಸ್ಯರನ್ನೊಳಗೊಂಡ ಡ್ರಾಫ್ಟಿಂಗ್‌ ಕಮಿಟಿಯು ಕೂಡ ಒಳಗೊಂಡಿದ್ದು ಇದನ್ನು ಸಂವಿಧಾನ ಶಿಲ್ಪಿ ಎಂದೇ ಕರೆಯಲ್ಪಡುವ ಡಾ.ಬಿ.ಆರ್. ಅಂಬೆಡ್ಕರ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿರುತ್ತಾರೆ. ಸಂವಿಧಾನವು ಮುಂದಿನ ಪೀಳಿಗೆಯು ನೆಮ್ಮದಿಯಿಂದ ಸಹಬಾಳ್ವೆ ಮಾಡುವ ಉದ್ದೇಶದಿಂದ ನಮ್ಮ ಹಿರಿಯರು ನಮಗೆ ಕೊಡುಗೆಯಾಗಿಕೊಟ್ಟ ಪವಿತ್ರ ಗ್ರಂಥವಾಗಿರುತ್ತದೆ. ಇದನ್ನು ಮೊದಲಿಗೆ ಅಕ್ಷರದಿಂದ ಬರೆಯಲ್ಪಟ್ಟಿರುತ್ತದೆ ಮತ್ತು ಪ್ರತಿಯೊಂದು ಪುಟದಲ್ಲೂ ನಮ್ಮ ಇತಿಹಾಸ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಸುಮಾರು 165 ದಿನಗಳ ಕಾಲ 11 ಸೆಷನ್‌ ಗಳನ್ನು ನಡೆಸಿ ಚರ್ಚಿಸಿ ಅಂತಿಮಗೊಳಿಸಿದ್ದ ದೇಶದ ಮಹಾನ್‌ ಗ್ರಂಥ ಸಂವಿಧಾನವಾಗಿರುತ್ತದೆ ಎಂದರು.ನಮ್ಮ ಸಂವಿಧಾನದಿಂದಾಗಿ ನಾವು ಇವತ್ತು ನೆಮ್ಮದಿಯಿಂದ ಮತ್ತು ವ್ಯವಸ್ಥಿತವಾದ ಜೀವನ ನಡೆಸುತ್ತಿದ್ದೇವೆ. ನಮ್ಮ ದೇಶವು ವಿಭಿನ್ನ ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಇತ್ಯಾದಿಗಳನ್ನು ಒಳಗೊಂಡಿದೆ. ಇಲ್ಲಿ ಪ್ರತಿಯೊಂದು ಕುಟುಂಬವು ವಿಭಿನ್ನತೆಯನ್ನು ಹೊಂದಿದ್ದು ಬಣ್ಣ, ಸಂಪ್ರದಾಯ, ಸಂಸ್ಕೃತಿ ಇತ್ಯಾದಿ ಇಷ್ಟೆಲ್ಲ ವಿಭಿನ್ನತೆ ಇದ್ದರೂ ಏಕತೆ ಇರುವುದು ನಮ್ಮ ದೇಶದ ಹೆಮ್ಮೆ ಎಂದು ಅವರು ಹೇಳಿದರು.ನಮ್ಮ ದೇಶದ ಶಕ್ತಿ ಎಂದರೆ ವಿಭಿನ್ನತೆಯಲ್ಲಿ ಏಕತೆ. ಇದನ್ನು ರಕ್ಷಿಸುತ್ತಿರುವುದು ನಮ್ಮ ಸಂವಿಧಾನ. ಸಂವಿಧಾನ ಇಲ್ಲದಿದ್ದಲ್ಲಿ ದೇಶ ಛಿದ್ರ, ಛಿದ್ರವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಬೇರೆ ದೇಶದ ಸಂವಿಧಾನಕ್ಕೆ ಹೋಲಿಸಿದರೆ ನಮ್ಮ ದೇಶದ ಸಂವಿಧಾನ ಯಾವುದನ್ನು ಬಿಟ್ಟಿರುವುದಿಲ್ಲ ಮತ್ತು ಎಲ್ಲರನ್ನು ಒಳಗೊಂಡಿರುವುದರ ಜೊತೆಗೆ ಸಮಾನತೆ ಸಾರುವ ಸಂವಿಧಾನವಾಗಿದೆ ಎಂದು ಅವರು ಹೇಳಿದರು.ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಗೌರವಿಸಬೇಕು ಮತ್ತು ಪೂಜಿಸಬೇಕು. ಏಕೆಂದರೆ ನಮ್ಮ ಹಕ್ಕುಗಳನ್ನು ಸಂರಕ್ಷಿಸುವುದು ಸಂವಿಧಾನ ಮತ್ತು ನೆಮ್ಮದಿಯ ಜೀವನ ಸಾಗಿಸಲು ಯಾವುದೇ ಒತ್ತಡ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಿದೆ. ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ನಾವು ಅದನ್ನು ರಕ್ಷಿಸಿದ್ದಲ್ಲಿ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ. ವಿಭಿನ್ನ ರೀತಿಯ ಜನರಿದ್ದರು ನೆಮ್ಮದಿ ಇರುವುದು ಸಂವಿಧಾನದಿಂದಾಗಿ ಭಾರತ ಇವತ್ತು ನೆಮ್ಮದಿಯಿಂದ, ಸುರಕ್ಷಿತವಾಗಿ ಇದೆ ಎಂದರೆ ಅದು ಸಂವಿಧಾನದಿಂದಾಗಿ ಸಂವಿಧಾನ ಇಲ್ಲದೆ ನಾವಿಲ್ಲ ಎಂದರು.ಪರಿಷದ್‌ ಅಧ್ಯಕ್ಷ ಶಾರದ ಅಧ್ಯಕ್ಷಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕೆ.ಆರ್‌. ಶಿವಶಂಕರ್‌, ಲಕ್ಷ್ಮೀ ಇದ್ದರು.