ಸಾರಾಂಶ
- ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಪ್ರಬಲ ಹೋರಾಟ ಉದ್ದೇಶ: ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ದೈತ್ಯ ಏಕಸ್ವಾಮ್ಯ ಬಂಡವಾಳಶಾಹಿಗಳ ಅಣತಿಯ ಮೇರೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ನಿರಂತರ ಫ್ಯಾಸಿಸ್ಟ್ ದಾಳಿಗಳನ್ನು ಎಸಗುತ್ತಿದೆ. ಇದನ್ನು ಖಂಡಿಸಿ ಜುಲೈ 9ರಂದು ಇಡೀ ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಹೇಳಿದರು.
ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿಗೆ ಸಂಯೋಜಿತ ಯು.ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜು ಸಿ & ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದಿಂದ ಶುಕ್ರವಾರ ಕಾಲೇಜು ಆವರಣದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಜುಲೈ 9ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೋಸ್ಟರ್ ಬಿಡುಗಡೆಗೊಳಿಸಿ, ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಅವಿರತ ತ್ಯಾಗ, ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಹರಣಗೊಳಿಸಿ 4 ಕಾರ್ಮಿಕ ಸಂಹಿತೆ (ಲೇಬರ್ ಕೋಡ್)ಗಳನ್ನು ಜಾರಿಗೊಳಿಸಲು ಸರ್ಕಾರವು ತುದಿಗಾಲಿನಲ್ಲಿ ನಿಂತಿದೆ. ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸಿ ಕಾಯಂ ಉದ್ಯೋಗಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಗುತ್ತಿಗೆ, ಹೊರಗುತ್ತಿಗೆ, ಹೊಸದಾಗಿ ಜಾರಿಗೊಳಿಸಲಾಗುವ ನಿಗದಿತ ಅವಧಿ ಉದ್ಯೋಗ ಇತ್ಯಾದಿಗಳು ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಅಧೀನ ಸರ್ಕಾರಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲು ಕೈಗೊಂಡ ಕರಾಳ ವಿನ್ಯಾಸವಾಗಿದೆ ಎಂದು ದೂರಿದರು.
ಸಾರ್ವತ್ರಿಕ ಮುಷ್ಕರ:ಕಾರ್ಮಿಕರು ಕೆಲಸ ಮಾಡುವ ಅವಧಿ, ಕನಿಷ್ಠ ವೇತನ ಸಾಮಾಜಿಕ ಭದ್ರತೆ ಇತ್ಯಾದಿ ಸೇರಿದಂತೆ ವ್ಯಾಖ್ಯಾನಿಸಲಾದ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಎಲ್ಲ ಮೂಲಭೂತ ಹಕ್ಕುಗಳಿಗೂ ಹಾಗೂ ಯೂನಿಯನ್ ಮಾಡುವ ಹಕ್ಕು, ಮನ್ನಣೆ, ಸಾಮೂಹಿಕ ಚೌಕಾಸಿ, ಆಂದೋಲನಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಯಾವುದೇ ರೀತಿಯ ಸಾಮೂಹಿಕ ಪ್ರತಿಭಟನೆ ಹಕ್ಕುಗಳನ್ನು ಪ್ರತಿಪಾದಿಸಲು ಇದು ಗಂಭೀರ ಸವಾಲಾಗಿದೆ. ಕಾರ್ಮಿಕ ಸಂಹಿತೆಗಳನ್ನು ಸೋಲಿಸಲು ಮತ್ತು ರದ್ದುಗೊಳಿಸಲು ಈ ಕಡುಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಪ್ರಬಲ ಹೋರಾಟ ಸಂಘಟಿಸುವ ಉದ್ದೇಶದಿಂದ ಜು.9ರ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಿಪ್ಪೇಸ್ವಾಮಿ ಅಣಬೇರು ಸಂಘಟನೆಯ ಕಾರ್ಯದರ್ಶಿಗಳು, ವಿರೂಪಾಕ್ಷಪ್ಪ ದೊಡ್ಡಮನಿ, ಪರಮೇಶ್ವರಪ್ಪ, ಕರಿಬಸಪ್ಪ, ಉಪಾಧ್ಯಕ್ಷರು, ರವಿಕುಮಾರ್, ಬಸವರಾಜ್ ಶ್ಯಾವಿ, ಮರುಳಸಿದ್ದಪ್ಪ, ಗಂಗಮ್ಮ, ಲತಾ, ಮಲ್ಲಣ್ಣ, ಬಸವರಾಜ್, ವಿಜಯ್, ಇನ್ನಿತರರು ಭಾಗವಹಿಸಿದ್ದರು.- - -
(ಬಾಕ್ಸ್) * ಒಪಿಎಸ್ ಖಾತ್ರಿಪಡಿಸಲಿ ಹೊಸ ಪಿಂಚಣಿ ಯೋಜನೆ ವಿರುದ್ಧ ದೇಶ ವ್ಯಾಪಿ ಪ್ರತಿಭಟನಾ ಚಳುವಳಿಗಳ ನಂತರ ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಹುನ್ನಾರ ನಡೆಯಿತು. ಪಿಂಚಣಿ ಪರಿಕಲ್ಪನೆಯನ್ನೇ ಸಮಾಧಿ ಮಾಡುವ ಈ ಪಿಂಚಣಿ ಬದಲಾಗಿ ಹಿಂದೆ ಇದ್ದ ಹಳೆಯ ಪಿಂಚಣಿ ಯೋಜನೆಯನ್ನೇ (ಒಪಿಎಸ್) ಖಾತ್ರಿಪಡಿಸಲು ಈ ಸಂದರ್ಭದಲ್ಲಿ ಆಗ್ರಹಿಸಲಾಗುವುದು ಎಂದು ಮಂಜುನಾಥ ಕೈದಾಳೆ ಹೇಳಿದರು.- - -
-4ಕೆಡಿವಿಜಿ31:ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೋಸ್ಟರನ್ನು ದಾವಣಗೆರೆಯಲ್ಲಿ ಬಿಡುಗಡೆ ಮಾಡಲಾಯಿತು.
;Resize=(128,128))
;Resize=(128,128))
;Resize=(128,128))