ಮಣಿಪಾಲ ಡಾ. ಟಿ. ಎಂ. ಎ. ಪೈ ಪಾಲಿಟಕ್ನಿಕ್ ನಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ವತಿಯಿಂದ ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025 ಶುಕ್ರವಾರ ಆರಂಭವಾಯಿತು.
ಮಣಿಪಾಲದಲ್ಲಿ ಜಿಲ್ಲಾ ಮುದ್ರಣಾಲಯ ಮಾಲಕರ ಸಂಘದಿಂದ ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್
ಮಣಿಪಾಲ: ನ್ಯಾಯಾಂಗ, ಶಿಕ್ಷಣ, ಆರೋಗ್ಯ ಇತ್ಯಾದಿ ಎಲ್ಲಾ ಇಲಾಖೆಗಳಿಗೆ ಮುದ್ರಣ ಸಂಸ್ಥೆಗಳ ಕೊಡುಗೆ ಅಮೂಲ್ಯ. ಸರ್ಕಾರಕ್ಕೆ ಮುದ್ರಣ ಕ್ಷೇತ್ರ ಬಹಳ ದೊಡ್ಡ ಸೇವೆ ನೀಡುತ್ತವೆ. ಆದರೂ ಸರ್ಕಾರ ಮುದ್ರಣ ಸಂಸ್ಥೆಗಳಿಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ರಾಜ್ಯದಲ್ಲಿ ಒಟ್ಟು 12 ಸಾವಿರ ಮುದ್ರಣಾಲಯವಿದೆ. ಅವರ ಕುಂದುಕೊರತೆ ಕೇಳುವವರಿಲ್ಲ ಎಂದು ಕರ್ನಾಟಕ ಪ್ರಿಂಟರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಿ.ಆರ್. ಜನಾರ್ದನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿನ ಡಾ. ಟಿ. ಎಂ. ಎ. ಪೈ ಪಾಲಿಟಕ್ನಿಕ್ ನಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ವತಿಯಿಂದ ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025 ರಲ್ಲಿ ಮಾತನಾಡಿದರು. ಬೆಂಗಳೂರಿನಲ್ಲಿ ಸುಮಾರು 65 ಎಕ್ರೆ ಜಾಗದಲ್ಲಿ ಪ್ರಿಂಟಿಂಗ್ ಟೆಕ್ ಪಾರ್ಕ್ ನಿರ್ಮಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಪ್ರಿಂಟಿಂಗ್ ಟೆಕ್ ಪಾರ್ಕ್ ಆರಂಭಿಸಬೇಕು ಎಂದರು. ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಸಮಾವೇಶ ಉದ್ಘಾಟಿಸಿ ಶುಭ ಹಾರೈಸಿದರು.ಟಿ.ಸತೀಶ್ ಯು. ಪೈ ಮತ್ತು ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಯು. ಮೋಹನ್ ಉಪಾಧ್ಯ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ರಾಜ್ಯ ಮುದ್ರಣಾಲಯಗಳ ಮಾಲಕರ ಸಂಘದ ಅಧ್ಯಕ್ಷ ಬಿ.ಆರ್. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಣಿಪಾಲ ಎಂಎಸ್‌ಡಿಸಿ ಮುಖ್ಯಸ್ಥ ಬ್ರಿ. ಡಾ. ಸುರ್ಜಿತ್ ಸಿಂಗ್ ಪಾಬ್ಲ ಆಗಮಿಸಿದ್ದರು.ಎಐಎಫ್‌ಎಂಪಿ ಉಪಾಧ್ಯಕ್ಷ ಮುಜೀಬ್ ಕೆ.ಎ., ಜಂಟಿ ಕಾರ್ಯದರ್ಶಿ ಪಿ.ವಿ.ಸತೀಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರಾಜ್ಯಸಮಿತಿಯ ಪ್ರಕಾಶ್ ಬಾಬು , ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗ ಮುಖ್ಯಸ್ಥೆ ರಜನಿ, ಜಿಲ್ಲಾ ಮುದ್ರಣಾಲಯಗಳ ಸಂಘದ ಅಧ್ಯಕ್ಷ ಸತೀಶ್ ನಾಯಕ್, ಸಮಿತಿಯ ಉಪಾಧ್ಯಕ್ಷ ಎ.ಎಂ.ಪ್ರಕಾಶ್ ಉಪಸ್ಥಿತರಿದ್ದರು.ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷ ಎಂ. ಮಹೇಶ್ ಕುಮಾರ್ ಸ್ವಾಗತಿಸಿ, ಸಹ ಅಧ್ಯಕ್ಷ ಅಶೋಕ್ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯಕ್ರಮ ಕಾರ್ಯದರ್ಶಿ ಅಂಶುಮಂತ್ ಜೋಶಿ ವಂದಿಸಿದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.