9ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ; ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ಭಾಗಿ

| Published : Jul 07 2025, 11:48 PM IST

9ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ; ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಜು. 9ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಜು. 9ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಕಾರ್ಮಿಕ ಹಕ್ಕುಗಳಿಗೆ ಒತ್ತಾಯಿಸಿ ಬಳ್ಳಾರಿಯಲ್ಲೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡರಾದ ಸೋಮಶೇಖರಗೌಡ, ಜೆ.ಸತ್ಯಬಾಬು ಡಾ.ಪ್ರಮೋದ್ ಹಾಗೂ ಎ.ಆದಿಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ 4 ಸಂಹಿತೆಗಳು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ-ಕಾರ್ಪೋರೇಟ್ ಪರವಾದ ನೀತಿಗಳ ವಿರುದ್ಧ ರಾಷ್ಟ್ರಮಟ್ಟದ ಮುಷ್ಕರಕ್ಕೆ ಕರೆ ಹಿನ್ನೆಲೆ ಬಳ್ಳಾರಿಯ ಗಾಂಧಿಭವನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಗಾಂಧಿ ಭವನದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಾಗುವುದು. ಅಲ್ಲಿ ಸಾರ್ವಜನಿಕ ಸಭೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಮುಷ್ಕರದಲ್ಲಿ ಎಐಯುಟಿಯುಸಿ, ಸಿಐಟಿಯು, ಎಐಟಿಯುಸಿ, ವಿಮಾ ನೌಕರರ ಸಂಘ, ಬ್ಯಾಂಕ್ ನೌಕರರ ಸಂಘಗಳು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಸಂಘಗಳು, ಗಣಿ ಕಾರ್ಮಿಕರ ಸಂಘ, ಹಾಸ್ಟೆಲ್, ವಿಮ್ಸ್ ಗುತ್ತಿಗೆ ಕಾರ್ಮಿಕರ ಸಂಘಗಳು, ಇತರ ಕಾರ್ಮಿಕ ಸಂಘಗಳು, ಕರ್ನಾಟಕ ಜನಶಕ್ತಿ, ರೈತ ಸಂಘಟನೆಗಳಾದ ಎಐಕೆಕೆಎಂಎಸ್, ಕೆಪಿಆರ್‌ಎಸ್, ಕರ್ನಾಟಕ ರಾಜ್ಯ ರೈತ ಸಂಘಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಗುಲಾಮಗಿರಿಯ ನೀಲನಕ್ಷೆಯಂತಿರುವ ಕಾರ್ಮಿಕ ಸಂಹಿತೆ ಜಾರಿಗೆ ತಂದು ದುಡಿಯುವ ವರ್ಗದ ಜನರ ಮೇಲೆ ಹೇರಲು ಕೇಂದ್ರ ಬಿಜೆಪಿ ಸರ್ಕಾರ ಆತುರದಿಂದ ಹವಣಿಸುತ್ತಿದೆ. ಕೆಲಸ ಹಾಗೂ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ದುಡಿಮೆಯ ಸಮಯ, ಕನಿಷ್ಠ ವೇತನಗಳು, ಸಾಮಾಜಿಕ ಭದ್ರತೆ ಇತ್ಯಾದಿ ಮತ್ತು ಸಂಘಟಿತರಾಗುವ ಹಕ್ಕು, ಅವರ ಸಾಮೂಹಿಕ ಚೌಕಾಶಿ ಹಕ್ಕುಗಳು, ಆಂದೋಲನಗಳು/ಹೋರಾಟಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಪ್ರತಿಭಟನೆಗಳ ಯಾವುದೇ ರೀತಿಯ ಸಾಮೂಹಿಕ ಅಭಿವ್ಯಕ್ತಿಗಳ ಮೇಲೆ ಕಾರ್ಮಿಕರ ಎಲ್ಲಾ ಮೂಲಭೂತ ಹಕ್ಕುಗಳಿಗೆ, ಕಾರ್ಮಿಕ ಸಂಹಿತೆಗಳು ಕಂಟಕವಾಗಲಿವೆ. ಒಟ್ಟಾರೆಯಾಗಿ ಮಾಲೀಕವರ್ಗದ ಹಿತಾಸಕ್ತಿಯಲ್ಲಿ ವ್ಯಾಪಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ಸಹ ದುಡಿಮೆಯ ಅವಧಿಯನ್ನು 8 ರಿಂದ 10 ತಾಸಿಗೆ ಏರಿಸಿರುವುದು, ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಜಾರಿಗೆ ತಂದಿರುವುದು, ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆಯನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿರುವುದು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನಿಲುವಿಗೆ ಸಾಕ್ಷಿಯಾಗಿವೆ ಎಂದು ದೂರಿದರು. ಜೆಸಿಟಿಯು ಪ್ರಮುಖರಾದ ಸೂರ್ಯನಾರಾಯಣ, ವಿ.ಘನ ಮಲ್ಲಿಕಾರ್ಜುನ, ಹನುಮಂತಪ್ಪ ಸಂಗನಕಲ್ಲುಕೃಷ್ಣಪ್ಪ, ಚೆನ್ನಪ್ಪ, ಬಸವರಾಜ್, ಕೀರ್ತಿರಾಜ್, ವೇಣಗೋಪಾಲ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು. ಇದೇ ವೇಳೆ ಅಖಿಲ ಭಾರತ ಮುಷ್ಕರದ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು.