ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ 2025- 26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿ ಕುಶಾಲನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಕುಶಾಲನಗರ ತಾಲೂಕು ಕಚೇರಿ ಮುಂಭಾಗ ಸೇರಿ ಘೋಷಣೆ ಕೂಗಿದರು. ಉಪನ್ಯಾಸಕರ ನೇಮಕಾತಿ ವಿವಿಧ ಕಾರಣಗಳಿಂದ ವಿಳಂಬ ಆಗುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಕೂಡಲೇ ಅತಿಥಿ ಉಪನ್ಯಾಸಕರನ್ನು ಅತಿ ಶೀಘ್ರ ನೇಮಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸರಕಾರಿ ಕಾಲೇಜುಗಳ ಮೂಲಭೂತ ಸೌಲಭ್ಯ ಹೆಚ್ಚಿಸಬೇಕು ಈ ಸಂಬಂಧ ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ತಾಲೂಕು ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.ಎ ಬಿ ವಿ ಪಿ ಕುಶಾಲನಗರ ತಾಲೂಕು ಸಂಚಾಲಕ ಪ್ರಣವ್, ರತೀಶ್, ಪೂರ್ಣಚಂದ್ರ, ಪ್ರಿಯದರ್ಶಿನಿ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.