ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12 ರಂದು ವಿವಿಧ ಸಂಘಟನೆಗಳಿಂದ ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮನವಿ ಮಾಡಿದರು
ಕನ್ನಡಪ್ರಭವಾರ್ತೆ, ಹಾಸನ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12 ರಂದು ವಿವಿಧ ಸಂಘಟನೆಗಳಿಂದ ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಸಂಯುಕ್ತ ಕರ್ನಾಟಕ ಹೋರಾಟ ಹಾಗೂ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ಜಂಟಿಯಾಗಿ ಕರೆ ನೀಡಿವೆ. ನಗರದ ‘ಶ್ರಮ’ ಸಿಐಟಿಯು ಕಚೇರಿಯಲ್ಲಿ ಫೆಬ್ರವರಿ ೩ರಂದು ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಜಂಟಿ ಹೇಳಿಕೆ ನೀಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳ ಮೇಲೆ ನೇರ ದಾಳಿ ಆಗಿದ್ದು, ಇದು ಕೇವಲ ಆರ್ಥಿಕವಲ್ಲ ರಾಜಕೀಯ ದಾಳಿಯೂ ಆಗಿದೆ ಎಂದು ಸಂಘಟನೆಗಳು ಆರೋಪಿಸಿವೆ.
೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಸಂಹಿತೆಗಳ ಮೂಲಕ ಯೂನಿಯನ್ ರಹಿತ ವಾತಾವರಣ ನಿರ್ಮಿಸಲು ಯತ್ನಿಸಲಾಗುತ್ತಿದೆ. ಇದರ ಪರಿಣಾಮವಾಗಿ ಶೇ.೯೦ರಷ್ಟು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಸೇರಿದಂತೆ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.ಜೀವನೋಪಾಯ ವೇತನದ ಭರವಸೆ ನೀಡದೇ, ಕನಿಷ್ಠ ವೇತನದ ಬದಲಿಗೆ ತಳಮಟ್ಟದ ಕೂಲಿಯನ್ನು ನಿಗದಿಪಡಿಸಲಾಗಿದ್ದು, ಎಲ್ಲಾ ವಲಯಗಳಲ್ಲಿ ವೇತನ ಹೆಚ್ಚಳಕ್ಕೆ ಅಡೆತಡೆ ನಿರ್ಮಿಸಲಾಗಿದೆ. ಮಾಲೀಕರ ಲಾಭಾಂಶ ಹೆಚ್ಚಿದರೂ ಕಾರ್ಮಿಕರ ವೇತನದ ಪಾಲು ಗಣನೀಯವಾಗಿ ಇಳಿಕೆಯಾಗಿದೆ. ಸಂಘ ರಚಿಸುವ ಹಕ್ಕು, ಸಾಮೂಹಿಕ ಚೌಕಾಸಿ ಶಕ್ತಿ ಹಾಗೂ ಮುಷ್ಕರದ ಹಕ್ಕಿನ ಮೇಲೂ ಕಠಿಣ ನಿರ್ಬಂಧ ಹೇರಲಾಗಿದೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಕಾಯ್ದೆಯಡಿ ಖಾತರಿಪಡಿಸಿದ ಕೆಲಸದ ಹಕ್ಕು ದುರ್ಬಲಗೊಳಿಸಲಾಗುತ್ತಿದ್ದು, ವಿದ್ಯುತ್ ಕ್ಷೇತ್ರದ ಖಾಸಗೀಕರಣದ ಮೂಲಕ ರೈತರು ಹಾಗೂ ಜನಸಾಮಾನ್ಯರಿಗೆ ಸಿಗುತ್ತಿದ್ದ ಸಬ್ಸಿಡಿ ಸೇವೆಗಳಿಗೆ ಅಡ್ಡಿ ಉಂಟಾಗುತ್ತಿದೆ. ಬೆಂಬಲ ಬೆಲೆ ನೀಡದೇ ಕಂಪನಿ ಕೃಷಿಗೆ ಒತ್ತು ನೀಡುವುದು, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮೂಲಕ ರೈತರ ಭೂಮಿ ಕಬಳಿಸುವ ನೀತಿಗಳು ರೈತರನ್ನು ಕೂಲಿಕಾರರು ಹಾಗೂ ನಿರುದ್ಯೋಗಿಗಳಾಗಿಸುತ್ತಿವೆ ಎಂದು ಆರೋಪಿಸಿದರು. ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್ ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ನೀಡದೇ ಬಂಡವಾಳಗಾರರಿಗೆ ಅನುಕೂಲವಾಗುವಂತಿದೆ. ರಾಜ್ಯ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿ ರೂಪಿಸಬಾರದೆಂಬ ಬೇಡಿಕೆಯನ್ನು ನಿರ್ಲಕ್ಷಿಸಿ, ಸಂಘಟನೆಗಳೊಂದಿಗೆ ಚರ್ಚೆ ನಡೆಸದೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವುದು ಕಾರ್ಮಿಕ ವಿರೋಧಿ ಧೋರಣೆಯ ಸ್ಪಷ್ಟ ಉದಾಹರಣೆ ಎಂದು ಹೇಳಿದರು.ಈ ಎಲ್ಲಾ ಜನವಿರೋಧಿ ನೀತಿಗಳನ್ನು ವಿರೋಧಿಸಿ ಫೆಬ್ರವರಿ ೧೨ರಂದು ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ವ್ಯಾಪಾರಿಗಳು ಒಟ್ಟಾಗಿ ಉತ್ಪಾದನೆ, ಸೇವೆ, ಸಂಚಾರ ಮತ್ತು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಪಿಕೆಟಿಂಗ್ ನಡೆಸಲಿದ್ದಾರೆ. ಎಲ್ಲಾ ವರ್ಗದ ಜನತೆ ಸ್ವಯಂಪ್ರೇರಿತವಾಗಿ ಮುಷ್ಕರದಲ್ಲಿ ಪಾಲ್ಗೊಂಡು ತಮ್ಮ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಮುಖಂಡರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯ ಈ ಜಂಟಿ ಹೇಳಿಕೆಯಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮರಾಜ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಕ.ರಾ. ರೈತ ಸಂಘದ ಜಿಲ್ಲಾಧ್ಯಕ್ಷ ರಘು, ಕ.ದ.ಸಂ.ಸ. (ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೆಹಳ್ಳಿ, ಹಿರಿಯ ದಲಿತ ಮುಖಂಡ ರಾಜಶೇಖರ್ ಹುಲಿಕಲ್, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, ಸಂವಿಧಾನ ಓದು ಅಭಿಯಾನ ಕರ್ನಾಟಕ ರಾಜು ಗೊರೂರು, ಸಾರಿಗೆ ನೌಕರರ ಸಂಘದ ಎಚ್.ಎಸ್. ಮಂಜುನಾಥ್, ಡಿವೈಎಫ಼್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಎಸ್‌ಎಫ಼್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಎಲ್.ಐ.ಸಿ. ನೌಕರರ ಸಂಘದ ಮಂಜುನಾಥ್, ಡಿ.ಎಚ್.ಎಸ್. ಜಿಲ್ಲಾ ಸಹ ಸಂಚಾಲಕ ರಾಜು ಸಿಗರನಹಳ್ಳಿ, ಕ.ರಾ.ರೈತ ಸಂಘ ತಾಲೂಕು ಅಧ್ಯಕ್ಷ ಶಾಂತರಾಜ ಅರಸು ಸೇರಿದಂತೆ ವಿವಿಧ ಕಾರ್ಮಿಕ, ರೈತ, ದಲಿತ, ಮಹಿಳಾ, ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳ ಭಾಗವಹಿಸಿದ್ದರು.