ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಮನಸ್ಸುಗಳನ್ನು ಕಟ್ಟುವ ವೇದಿಕೆಗಳಾಗಬೇಕು
ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಜು. 25 ಮತ್ತು 26ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಸಾಗಿದ್ದು, ತಾಲೂಕಿನ ಕೊರಡಕೇರಿ ಗ್ರಾಮದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ದೊಡ್ಡನಗೌಡ ಪಾಟೀಲ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನವು ಕೇವಲ ಸಾಹಿತ್ಯಿಕ ಕಾರ್ಯಕ್ರಮವಲ್ಲ; ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಬಿಂಬಿಸುವ ಮಹತ್ವದ ವೇದಿಕೆಯಾಗಿದೆ. ಇಂತಹ ಸಮ್ಮೇಳನಗಳು ಕನ್ನಡ ಭಾಷೆಯ ಬೆಳವಣಿಗೆಗೆ ಹೊಸ ಚೈತನ್ಯ ನೀಡುವ ಜತೆಗೆ ಯುವಜನರಲ್ಲಿ ಭಾಷಾಭಿಮಾನ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಕವಿಗೋಷ್ಠಿ, ವಿಚಾರಗೋಷ್ಠಿ, ಪುಸ್ತಕ ಹಾಗೂ ವಿಶೇಷ ಸಂಚಿಕೆಗಳ ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಎರಡು ದಿನಗಳ ಕಾಲ ನಡೆಯಲಿವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಮನಸ್ಸುಗಳನ್ನು ಕಟ್ಟುವ ವೇದಿಕೆಗಳಾಗಬೇಕು. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಇಂತಹ ಸಮ್ಮೇಳನಗಳಿಂದ ಸಾಧ್ಯ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ಕನ್ನಡಾಭಿಮಾನಿಯೂ ಈ ಕನ್ನಡದ ಜಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ, ಸಮ್ಮೇಳನದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಸಮ್ಮೇಳನವನ್ನು ಜಿಲ್ಲೆಯ ಇತಿಹಾಸದಲ್ಲೇ ಮಾದರಿಯಾಗಿ ರೂಪಿಸುವ ಗುರಿ ಹೊಂದಿದ್ದು, ಕನ್ನಡಮ್ಮನ ತೇರನ್ನು ಎಳೆಯುವ ಈ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೆಂಕಪ್ಪ ವಾಲೀಕಾರ, ಹನುಮೇಶ ಶೆಟ್ಟರ್ ಗುಮಗೇರಿ, ಚಂದಪ್ಪ ಹಕ್ಕಿ, ರವೀಂದ್ರ ಬಾಕಳೆ, ಶರಣಪ್ಪ ಲೈನದ್, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ ಮಾಟಲದಿನ್ನಿ, ಎಸ್.ಜಿ. ಕಡೆಮನಿ, ಶಿವಾನಂದ ಹಿರೇಮಠ, ಶರಣಪ್ಪ ವಂದಾಲಿ, ದೇವಣ್ಣ ಬಳಿಗಾರ, ಪ್ಯಾಟೆಪ್ಪ ಸೂಡಿ, ಬಸವರಾಜ ಉಪ್ಪಲದಿನ್ನಿ, ನಾಗರಾಜ ಬಡಿಗೇರ್, ಮಂಜುನಾಥ ಗುಳೇದಗುಡ್ಡ, ವೀರೇಶ ಟೆಂಗುಂಟಿ, ಶಂಕರ್ ತೋಟದ, ಶಂಕ್ರಪ್ಪ ಕುಷ್ಟಗಿ ಉಪಸ್ಥಿತರಿದ್ದರು.