ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ತಾಲೂಕು ಘಟಕ ಪದಾಧಿಕಾರಿಗಳ ಸಭೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದಲ್ಲಿ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.ಸ್ಥಾಪಕ ಅಧ್ಯಕ್ಷ ವಸಂತ್ ಸಾಲಿಯಾನ್ ಉದ್ಘಾಟಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಸಭೆಯಲ್ಲಿ, ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು. ಅನಾಮಧೇಯ ವ್ಯಕ್ತಿ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಿಸಿದ ತನಿಖಾ ವಿಚಾರಗಳನ್ನು ಮುಂದಿಟ್ಟು ಕ್ಷೇತ್ರ ಹಾಗೂ ಧರ್ಮಾಧಿಕಾರಿ ಮತ್ತು ಅವರ ಕುಟುಂಬ ವರ್ಗದವರನ್ನು ನಿಂದಿಸುವ ಹಾಗೂ ಕ್ಷೇತ್ರಕ್ಕೆ ಅಪಚಾರವೆಸಗುವ ಅಪಪ್ರಚಾರಗಳನ್ನು ಪದೇ ಪದೇ ಗೈಯ್ಯುತ್ತಿರುವ ವಿಚಾರವನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಖಾವಂದರ ಜನಪರವಾದ ಎಲ್ಲಾ ಕಾರ್ಯ ಯೋಜನೆಗಳ ಬಗ್ಗೆ ಅದಕ್ಕೆ ಧಕ್ಕೆಯಾಗದಂತೆ ಜನ ಜಾಗೃತಿ ವೇದಿಕೆ ಜೊತೆ ನಿಲ್ಲುವುದೆಂದೂ ತಮ್ಮ ಸ್ಪಷ್ಟ ನಿಲುವು ಮತ್ತೊಮ್ಮೆ ಪ್ರಕಟಿಸಲಾಯಿತು.ಸಭೆಯಲ್ಲಿ ವರದಿ ಸಾಧನಾ ವಿವರವನ್ನು ಮಂಡಿಸಲಾಯಿತು. ಆ ಬಳಿಕ 2025- 26ನೇ ಸಾಲಿನ ಕ್ರಿಯಾಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಲಾಯಿತು.ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ವೆಂಕಟರಾಯ ಅಡೂರ್, ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ ಬೆಲಾಳು, ಎಲ್ಲಾ ವಲಯದ ವಲಯ ಅಧ್ಯಕ್ಷರು ಹಾಗೂ ಜನಜಾಗೃತಿ ಪದಾಧಿಕಾರಿಗಳು ಇದ್ದರು.ಗ್ರಾ.ಯೋ. ನೂತನ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ವಿಚಾರ ಮಂಡಿಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕ್ರಿಯಾ ಯೋಜನೆ ಮಂಡಿಸಿದರು. ಬೆಳ್ತಂಗಡಿ ಯೋಜನಾಧಿಕಾರಿ ಯಶೋಧರ ಕೆ ಸ್ವಾಗತಿಸಿದರು. ತಾ.ಸದಸ್ಯೆ ಮಂಜುಳಾ ಕಾರಂತ ಪ್ರಾರ್ಥನೆ ಹಾಡಿದರು. ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್ ವಂದಿಸಿದರು.
ತನಿಖೆಗೆ ಸ್ವಾಗತ: ಅನಾಮಿಕ ವ್ಯಕ್ತಿ ಧರ್ಮಸ್ಥಳದ ಆಸು ಪಾಸು ಅನಧಿಕೃತವಾಗಿ ಶವಗಳನ್ನು ಹೂಳಲಾಗಿದೆ ಎನ್ನುವ ವಿಚಾರದಂತೆ ರಾಜ್ಯ ಸರಕಾರ ಈ ಪ್ರಕರಣವನ್ನು ಎಸ್ಐಟಿ ತಂಡ ರಚಿಸಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ತಾಲೂಕು ಜನಜಾಗೃತಿ ವೇದಿಕೆ ಸ್ವಾಗತಿಸಿತು.