ಸಾರಾಂಶ
ಹುಬ್ಬಳ್ಳಿ: ಶ್ರೀ ಸಹಸ್ರಾರ್ಜುನ ಮಂದಿರ ನಿರ್ಮಾಣಕ್ಕೆ ಅಗತ್ಯ ಜಾಗ ಮಂಜೂರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿದ್ದೆ. ಆಗ ಸಿದ್ದರಾಮಯ್ಯ ಅವರು ಅವರ ಸಮಾಜವೂ ಬರಲಿ ಎಂದಿದ್ದರು. ಸಮಾಜದವರೆಲ್ಲರೂ ಸೇರಿ ಜಾಗ ಮಂಜೂರು ಮಾಡಿಸಿಕೊಂಡು ಬಂದೆವು. ಮಂದಿರ ನಿರ್ಮಾಣಕ್ಕೂ ಸಿಎಂ ಜತೆಗೆ ಚರ್ಚಿಸಿ ಅಗತ್ಯ ಸಹಕಾರ ನೀಡಲಾಗುವುದು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಹು-ಧಾ ವತಿಯಿಂದ ಇಲ್ಲಿಯ ತುಳಜಾಭವಾನಿ ದೇವಸ್ಥಾನ ಎದುರಿನಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಶ್ರೀ ರಾಜರಾಜೇಶ್ವರ ಶ್ರೀಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಎಸ್‌ಎಸ್‌ಕೆ ಸಮಾಜದಿಂದ ನಿರ್ಮಿಸುತ್ತಿರುವ ಶ್ರೀ ಸಹಸ್ರಾರ್ಜುನ ಮಂದಿರ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಸ್‌ಎಸ್‌ಕೆ ಸಮಾಜ ಹಿಂದೂ ಧರ್ಮದ ಶಕ್ತಿಯಾಗಿದೆ. ಒಳ್ಳೆಯ ಸಂಘಟನೆಯ ಮನೋಭಾವ ಹೊಂದಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಮಂದಿರ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹10 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸಮಾಜ ಬಸವಣ್ಣನವರ ಕಾಯಕತತ್ವವನ್ನು ಪ್ರತಿಪಾದಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆ ತರುತ್ತಿದ್ದಾರೆ. ಇಂಥ ಸಮಾಜದವರು ತಮ್ಮ ಕುಲದೇವರು ಶ್ರೀ ಸಹಸ್ರಾರ್ಜುನ ಮಹಾರಾಜರ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.ಕೇಂದ್ರ ಪಂಚ ಸಮಿತಿ ಚೀಫ್ ಟ್ರಸ್ಟಿ ಸತೀಶ ಮೆಹರವಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಮಾಜಿ ಶಾಸಕ ಅಶೋಕ ಕಾಟವೆ, ಉಪ ಚೀಫ್ ಟ್ರಸ್ಟಿ ಭಾಸ್ಕರ ಜಿತೂರಿ, ಪ್ರಮುಖರಾದ ಶಶಿಕುಮಾರ ಮೆಹರವಾಡೆ, ಮೀರಾ ಮೆಹರವಾಡೆ, ಅರವಿಂದ ಕಲಬುರ್ಗಿ, ನಾಗೇಶ ಕಲಬುರ್ಗಿ, ಡಿ.ಕೆ. ಚವ್ಹಾಣ, ಟಿ.ಎಂ. ಮೆಹರವಾಡೆ, ರಂಗಾ ಬದ್ದಿ, ವಿಠ್ಠಲ ಲದವಾ, ನೀಲಕಂಠಸಾ ಜಡಿ, ಕಿರಣ ಪೂಜಾರಿ, ಎನ್.ಎನ್. ಖೋಡೆ, ಶ್ರೀಧರ ಪವಾರ, ಅಶೋಕ ಹಬೀಬ, ಚೇತನ ಪವಾರ, ಗೋಪಾಲ ಬದ್ದಿ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))