ಸಾರಾಂಶ
ಮಾಗಡಿ: ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶ ಮಾಡಿದ್ದು ಈಗ ಪರಿಸರ ಸಂರಕ್ಷಣೆಗೆ ನಾವು ಕೊಡುಗೆ ನೀಡುವ ಅನಿವಾರ್ಯತೆ ಇದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿ ಪೋಷಿಸುವ ಕೆಲಸ ನಾವೇ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಳೆಗಾಗಿ ಮತ್ತಷ್ಟು ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಚಕ್ರಬಾವಿ ಮರಳು ಸಿದ್ದೇಶ್ವರ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಮರಳುದೇವನಹಳ್ಳಿಪುರದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿ ಹಾಗೂ ಸ್ಥಳೀಯರ ಸಹಕಾರದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಲುಮರದ ತಿಮ್ಮಕ್ಕನವರು ನಮ್ಮ ತಾಲೂಕಿನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅವರು ಮರಗಳನ್ನು ಹೆತ್ತ ಮಕ್ಕಳಂತೆ ಪೋಷಣೆ ಮಾಡಿ ಇಡೀ ವಿಶ್ವವೇ ಅವರತ್ತ ನೋಡುವಂತೆ ಮಾಡಿದ್ದಾರೆ. ಯುವಕರು ಅವರನ್ನು ಮಾದರಿಯಾಗಿಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಹಾಗೂ ಇತರರಿಗೂ ಜಾಗೃತಿ ಮೂಡಿಸಬೇಕು. ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚು ಬಳಸಿ ಪರಿಸರ ಉಳಿಸುವ ಕೆಲಸ ಮಾಡಬೇಕು. ದೇವಸ್ಥಾನದ ಸುತ್ತಲೂ ಹಣ್ಣಿನ ಗಿಡ, ಹೂವಿನ ಗಿಡಗಳನ್ನು ಬೆಳೆಸಬೇಕು. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.ವಿದ್ಯಾರ್ಥಿ ಮಿತ್ರ ರವಿಕಿರಣ್ ಮಾತನಾಡಿ, ಸಾಲು ಮರದ ತಿಮ್ಮಕ್ಕಜ್ಜಿಯ ಆಯುಷ್ಯ ವೃದ್ಧಿಗಾಗಿ ಮತ್ತು ಮಾಗಡಿ ಕೆಂಪೇಗೌಡರ ಸ್ಮರಣಾರ್ಥ 200 ಹಣ್ಣಿನ ಗಿಡಗಳನ್ನು ಪ್ರಾಣಿ ಪಕ್ಷಿಗಳ ಆಹಾರಕ್ಕೆ ನೆರವಾಗಲು ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಅಭಿಯಾನದಂತೆ ಮುಂದುವರಿಸಲಾಗುವುದು. ಕಳೆದ 3 ವರ್ಷಗಳಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಮೂಕ ಪಕ್ಷಿಗಳಿಗೆ ನೇರವಾಗಲು ಈ ಅಭಿಯಾನ ಅವಶ್ಯಕವಾಗಿದೆ. ಈ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿರುವ ಭರವಸೆ ತಂಡ, ನಮ್ಮ ಮಾಗಡಿ ತಂಡ, ಕರ್ನಾಟಕ ಬಲ ಸೇನೆ ತಂಡ, ನನ್ ಮಿನಿ ರೇಡಿಯೋ ತಂಡ, ಮಾಗಡಿ ರೈತ ಸಂಘದ ಪದಾಧಿಕಾರಿಗಳು ಸೇರಿ ದೊಡ್ಡ ಮಟ್ಟದಲ್ಲಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ರೈತ ಮುಖಂಡ ನರಸಿಂಹಮೂರ್ತಿ ಮಾತನಾಡಿ, ಯುವಕರು ಬೆಂಗಳೂರಿನಿಂದ ರಜಾ ದಿನಗಳಲ್ಲಿ ಗ್ರಾಮೀಣ ಭಾಗಕ್ಕೆ ಬಂದು ಪರಿಸರ ಉಳಿಸುವ ನಿಟ್ಟಿನಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೊಡುಗೆ ನೀಡಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸ್ವಯಂಸೇವಾ ಸಂಘದ ಸದಸ್ಯರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್)
ಕನಕಪುರ ತಾಲೂಕಿನ ಮರಳುದೇವನಹಳ್ಳಿಪುರದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿ ಹಾಗೂ ಸ್ಥಳೀಯರ ಸಹಕಾರದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.