ಸಾರಾಂಶ
ಹುಬ್ಬಳ್ಳಿ : ಮದ್ಯದ ದರ ಏರಿಕೆ ಪ್ರಸ್ತಾವನೆ ಸದ್ಯಕ್ಕಿಲ್ಲ. ಸರ್ಕಾರದ ಬಳಿಯೂ ಈ ತರಹದ ಯಾವುದೇ ಪ್ರಸ್ತಾವನೆ, ಬೇಡಿಕೆ ಇಟ್ಟಿಲ್ಲ. ಈಗಾಗಲೇ ಹರಡಿರುವ ಸುದ್ದಿ ಕೇವಲ ಊಹಾಪೋಹವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸುದ್ದಿಗಳನ್ನು ಬರೀ ಮಾಧ್ಯಮಗಳಲ್ಲಿ ಮಾತ್ರ ನೋಡುತ್ತಿದ್ದೇವೆ. ಅಬಕಾರಿ ಇಲಾಖೆಯಿಂದ ವ್ಯಾಪಾರ ಸ್ನೇಹಿ ಅದಾಲತ್ ಆರಂಭಿಸುವ ವಿಚಾರವಿದೆ. ಇದು ಬಹಳ ದಿನಗಳಿಂದ ನಡೆಯುತ್ತಿರುವ ಚಿಂತನೆ ಎಂದರು.
ಗೋವಾದಲ್ಲಿ ಮದ್ಯದ ದರ ಕಡಿಮೆ ಇದೆ. ಏಕೆಂದರೆ ಅಲ್ಲಿ ಯಾವುದೇ ತೆರಿಗೆ ಇಲ್ಲ. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಸ್ಪಿರಿಟ್ ಹೋಗುತ್ತದೆ. ಅದನ್ನು ತಡೆಯಲಾಗುತ್ತಿದೆ. ನಮ್ಮ ರಾಜ್ಯದ ಲಿಕ್ಕರ್ ಚೆನ್ನಾಗಿದೆ. ಕೆಲವು ರಾಜ್ಯಗಳಲ್ಲಿ ಕಳಪೆ ಲಿಕ್ಕರ್ ಇದೆ. ಇದು ನಮ್ಮ ರಾಜ್ಯಕ್ಕೆ ಬರಬಾರದು. ಇದಕ್ಕೆ ಕಡಿವಾಣ ಹಾಕಲಾಗಿದೆ ಎಂದರು.
ಎಂಎಸ್‌ಐಎಲ್‌ಗಳಿಗೆ ಹೊಸದಾಗಿ ಯಾವುದೇ ಪರವಾನಗಿ ಕೊಡುವುದಿಲ್ಲ. ಈ ಕುರಿತು ಹೊಸ ಚಿಂತನೆ ಕೂಡ ನಡೆಯುತ್ತಿದೆ. ಹೊಸ ಚಿಂತನೆಯಿಂದ ಮದ್ಯದ ಅಂಗಡಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ ಎಂದರು.
ಯಾವುದೇ ದುರ್ಬಳಕೆ ಆಗಿಲ್ಲ
ಬಿಜೆಪಿಯವರು ವಾಸ್ತವ ಅರಿತು ಮಾತನಾಡುವುದನ್ನು ಕಲಿಯಲಿ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ. ಹೆಚ್ಚು ಅನುದಾನ ಕೊಡಲು ಸೂಚಿಸಿದ್ದಾರೆ ಎಂದರು.
ವಿವಾದ ಬಿಡಿ
ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ರಾಜ್ಯಕ್ಕೆ ಅಕ್ಕಿ ಕೊಡಬೇಕು. ಇದು ಬಿಟ್ಟು ಬಿಜೆಪಿಯವರು ಬರೀ ಜಾತಿ- ಧರ್ಮದ ಕುರಿತು ವಿವಾದ ಎತ್ತುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ವಿಷಯ ಪ್ರಮುಖವಾಗಿದೆ ಎಂದು ಆರೋಪಿಸಿದರು.
ಕೇವಲ ಮಾಧ್ಯಮ ಸೃಷ್ಟಿ
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿಚಾರ ಬರಿ ಮಾಧ್ಯಮದ ಸೃಷ್ಟಿಯಾಗಿದೆ. ಈ ವಿಷಯ ಹಾದಿ-ಬೀದಿಯಲ್ಲಿ ಮಾತನಾಡುವುದಲ್ಲ. ಈ ಸ್ಥಾನಗಳಿಗೆ ಅದರದೇ ಆದ ಗೌರವವಿದೆ ಎಂಬುದನ್ನು ಅರಿತುಕೊಳ್ಳಿ. ಆಯ್ಕೆ ಮಾಡಬೇಕು ಬೇಡ ಎಂಬುದನ್ನು ಪಕ್ಷದ ಹೈಕಮಾಂಡ್ ಚರ್ಚಿಸಿ ತೀರ್ಮಾನಿಸುತ್ತದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು.