ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಮತ್ತು ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಮೈಸೂರಿನ ಪ್ರಮುಖ ವೃತ್ತ, ದೇವಸ್ಥಾನ, ಮನೆಗಳಲ್ಲಿ ಗೌರಿ- ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಹಬ್ಬ ಆಚರಿಸಿದರೆ. ಕೆಲವು ಯುವಕರು ಮತ್ತು ಮಕ್ಕಳು ಅನೇಕ ಕಡೆಗಳಲ್ಲಿ ಚಂದಾ ಸಂಗ್ರಹಿಸಿ, ಸಣ್ಣ ಪುಟ್ಟ ರಸ್ತೆ ಸೇರಿದಂತೆ ಗಲ್ಲಿ ಗಲ್ಲಿಗಳಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿದ್ದರು.
ಎಲ್ಲಾ ವಾರ್ಡ್‌ಗಳಲ್ಲಿ ಹಾಗೂ ಕೆಲವರು ತಮ್ಮ ತಮ್ಮ ಮನೆಗಳ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶನಿವಾರ ನಗರದ ಗಣಪತಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿತು.ಗಣಪತಿಗೆ ಮಹಾಸಂಕಲ್ಪ ಪೂಜೆ, ಗಂಗಾಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ರಜತ ಕವಚಾಲಂಕಾರ, ವಿಶೇಷ ಹೂವಿನ ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ, ಸಹಸ್ರ ಬಿಲ್ವ ಪೂಜೆ, ಕುಂಕುಮ ಅರ್ಚನೆ ಮುಂತಾದ ಸೇವೆಗಳು ನೆರವೇರಿತು.
ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ಕೆ.ಆರ್. ಠಾಣೆ ಬಳಿಯ ಗಣಪತಿ ದೇವಸ್ಥಾನ, ಖಾಸಗಿ ಬಸ್ ನಿಲ್ದಾಣ ಬಳಿಯ ಪಂಚಮುಖಿ ದೇವಸ್ಥಾನ, ಚಾಮುಂಡಿಪುರಂ, ವಿಶ್ವೇಶ್ವರನಗರ, ಜೆ.ಪಿ. ನಗರ, ವಿಜಯನಗರ, ಕುವೆಂಪುನಗರ, ಸರಸ್ವತಿಪುರಂ, ಟಿ.ಕೆ. ಬಡಾವಣೆ, ಸಿದ್ದಾರ್ಥನಗರ, ಪಡುವಾರಹಳ್ಳಿ, ಬೋಗಾದಿ 2ನೇ ಹಂತ, ರಾಮಕೃಷ್ಣ ನಗರ, ಶಾರದಾದೇವಿ ನಗರ ಮತ್ತು ವಿವೇಕಾನಂದ ವೃತ್ತ ಸೇರಿದಂತೆ ವಿವಿಧೆಡೆಯಲ್ಲಿನ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.ಬಳಿಕ ನಗರದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿದ ಸಾರ್ವಜನಿಕರು ವಿಘ್ನ ನಿವಾರಕನ ದರ್ಶನ ಪಡೆದರು.
ಅರಮನೆ ಉತ್ತರ ಬಾಗಿಲಿನ ವಿನಾಯಕ ದೇವಸ್ಥಾನ ಸೇರಿದಂತೆ ಮುಜರಾಯಿ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಗಣಪತಿ ದೇವಸ್ಥಾನದ ಬಳಿ ಕೆ. ಪುಷ್ಪಲತಾ ನಾರಾಯಣ ತಂಡವರು ಭಕ್ತಿಗೀತೆ ಮತ್ತು ಭಜನೆ ನಡೆಯಿತು.ಪರಿಸರ ಸ್ನೇಹಿ ಮೂರ್ತಿಗಳಿಗೆ ಒತ್ತು:
ಜಿಲ್ಲೆಯಾದ್ಯಂತ ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ತಂದು ಸಾರ್ವಜನಕರು ಪ್ರತಿಷ್ಠಾಪಿಸಿದ್ದು ಹೆಚ್ಚುಕಂಡುಬಂತು. ಸಾರ್ವಜನಿಕ ಸ್ಥಳಗಳಲ್ಲಿ ಹೊರತುಪಡಿಸಿ, ಮನೆಗಳಲ್ಲಿ ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡಲಾಗಿತ್ತು.ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಗಣೇಶ ಹೆಚ್ಚಾಗಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಲಾಯಿತು. ಜತೆಗೆ ಹಲವು ಮನೆಗಳಲ್ಲಿ ಅವರೇ ಮೂರ್ತಿಗಳನ್ನು ತಯಾರಿಸಿದ್ದರು. ಈ ನಡುವೆಯೂ ಮಾರುಕಟ್ಟೆಯಲ್ಲಿ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
ಕೆ.ಜಿ.ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನದ ಬಳಿ, ರಾಮಸ್ವಾಮಿ ವೃತ್ತ ಬಳಿ, ಕುವೆಂಪುನಗರ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿರುವ ಬೃಹತ್ ಗಣೇಶ ಮೂರ್ತಿಗಳು ನೋಡುಗಳ ಕಣ್ಮನ ಸೆಳೆಯುತ್ತಿವೆ.ಮೊದಲ ದಿನವೇ ವಿಸರ್ಜನೆ:
ಬಹುತೇಕ ಮನೆಗಳಲ್ಲಿ ಸಾರ್ವಜನಿಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮೊದಲ ದಿನವೇ ವಿಸರ್ಜಿಸಿದರು. ಯುವಕರ ಬಳಗದಿಂದ ರಸ್ತೆ, ವೃತ್ತ, ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಕೆರೆ, ಕಾಲುವೆಗಳಲ್ಲಿ ವಿಸರ್ಜನೆ ಮಾಡಿದರೆ, ಮನೆಯಲ್ಲಿ ಕೂರಿಸಿದ್ದ ಕೆಲವರು ನಗರ ಪಾಲಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ವಿಸರ್ಜಿಸಿದರು.ವಿಶೇಷ ಗಣೇಶನ ಮೂರ್ತಿಗಳು:
ಈ ಬಾರಿ ಅನೇಕ ಗಣೇಶನ ವಿಗ್ರಹಗಳು ಗಮನ ಸೆಳೆದವು. ಕಲಾವಿದ ರೇವಣ್ಣ ಅವರು ವಿಭಿನ್ನ ಗಣೇಶ ಮೂರ್ತಿಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಗಣಪತಿ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಂಸದ ಯದುವೀರ್, ಅಯೋಧ್ಯಾ ರಾಮಲಲ್ಲಾ ವಿಗ್ರಹದ ಜತೆಗೆ ಗಣೇಶ, ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ.ಎಚ್. ವಿಜಯಶಂಕರ್, ನಟ ರಿಷಬ್ ಶೆಟ್ಟಿ, ಪುನೀತ್ ರಾಜ್ಕುಮಾರ್ ಸೇರಿ ಹಲವು ಮೂರ್ತಿ ಗಮನ ಸೆಳೆದವು.