ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜೆ.ಎಚ್.ಪಟೇಲ್ ಬಡಾವಣೆಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್‌ಟಿಪಿಐ) ಕೇಂದ್ರದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಕ್ರಮಕ್ಕಾಗಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ದಾವಣಗೆರೆಯಲ್ಲಿ ಈಗಾಗಲೇ ಎಸ್‌ಟಿಪಿಐ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರದ ವಿಸ್ತೃತ ಚಟುವಟಿಕೆಗಳಿಗೆ ಉತ್ತೇಜನ, ಐಟಿ ಪಾರ್ಕ್ ಸ್ಥಾಪಿಸಲು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ದೂಡಾ ಅಧಿಕಾರಿಗಳ ಸಮೇತ ಎಸ್‌ಟಿಪಿಐ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ಇದೇ ವೇಳೆ ಮಾತನಾಡಿದ ಸಂಸದೆ ಡಾ.ಪ್ರಭಾ, ಪಿಪಿಪಿ ಮಾದರಿಯಲ್ಲಿ ಐಟಿ ವಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ, ಐಟಿ ಬಿಟಿ ಕಂಪನಿಗಳು ಇಲ್ಲಿ ಶೀಘ್ರವೇ ಕಾರ್ಯಾರಂಭಿಸಲುಬೇಕಾದ ನೆರವು ನೀಡಲು ಎಲ್ಲಾ ಅಧಿಕಾರಿಗಳು ಮುಂದಾಗಬೇಕು. ಸರ್ಕಾರದ ಐಟಿ ಬಿಟಿ ಮಂತ್ರಾಲಯದ ಬಿಯಾಂಡ್ ಬೆಂಗಳೂರು ಕಲ್ಪನೆಯಡಿ ಸಾಫ್ಟ್ ವೇರ್ ಕಂಪನಿಗಳನ್ನು ಬೆಂಗಳೂರಿನಿಂದ ಹೊರಗಡೆ ಕರೆ ತರಲು ಕಂಪನಿಗಳನ್ನು ಉತ್ತೇಜಿಸುವ ನಿಯಮಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಆ.14ರಂದು ದಾವಣಗೆರೆ ಜಿಲ್ಲೆಯ ಎಲ್ಲಾ ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಎಲ್ಲಾ ಅಭಿಪ್ರಾಯ ಪಡೆದು, ವಿಷನ್ ದಾವಣಗೆರೆಗೆ ಕೈಜೋಡಿಸಲು ಆಹ್ವಾನಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.
ದಾವಣಗೆರೆ ಜಿಲ್ಲೆಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 30 ಸಾವಿರ ಚದರಡಿ ಕಟ್ಟಡದಲ್ಲಿ ಮಲ್ಟಿಸ್ಕಿಲ್ಸ್ ಟ್ರೈನಿಂಗ್ ಸೆಂಟರ್ (ಎಂಎಸ್‌ಟಿಪಿ) ಹಾಗೂ ಮಾಡಲ್ ಕೆರಿಯರ್ ಕೌನ್ಸಿಲ್(ಎಂಸಿಸಿ) ಸ್ಥಾಪಿಸಲು ಸ್ಥಳ ನಿಗಪಡಿಸಲಾಯಿತು. ಶೀಘ್ರವೇ ಎಸ್‌ಟಿಪಿಐ, ರಾಜ್ಯದ ಐಟಿಬಿಟಿ ಇಲಾಖೆ ಹಾಗೂ ಕಿಯೋನಿಕ್ಸ್‌ನ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಯಿತು.ಎಐ, ರೋಬೋಟಿಕ್ಸ್, ಕ್ವಾಂಟಮ್ ಕಂಪ್ಯೂಟರಿಂಗ್, ಡ್ರೋನ್ ಪ್ರಯೋಗಾಲಯಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಸುಸಜ್ಜಿತಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.
ಡಾ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ದಾವಣಗೆರೆ ವಿಶ್ವವಿದ್ಯಾನಿಲಯ, ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಎಂ.ಬಿ.ಎ, ಪಾಲಿಟೆಕ್ನಿಕ್ ಕಾಲೇಜು ಪ್ರತಿನಿಧಿಗಳು, ವಿವಿಧ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು. ಎಸ್‌ಟಿಪಿಐ ನಿರ್ದೇಶಕ ಡಾ.ಸಂಜಯ್ ತ್ಯಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು.ಪಾಲಿಕೆ ಆಯುಕ್ತೆ ರೇಣುಕಾ, ತಹಸೀಲ್ದಾರ್ ಅಶ್ವತ್ಥ್ರ ಜೊತೆಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿದರು. ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ಹೆಚ್ಚುವರಿ ನಿರ್ದೇಶಕ ಸುಬೋಧ್ ಹುನಗುಂದ, ಸೇಷಿ ಕುಮಾರ ಇತರರು ಇದ್ದರು.