ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ಹನುಮಾಲೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಮತ್ತು ಡಿ.13ರಂದು ಗಂಗಾವತಿಯಲ್ಲಿ ಆಯೋಜಿಸಿರುವ ಸಂಕೀರ್ತನಾ ಯಾತ್ರೆಯ ಯಶಸ್ವಿಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಹನುಮಮಾಲೆ ಕಾರ್ಯಕ್ರಮ ನಿಮಿತ್ತ ನಗರದ ಶ್ರೀ ದುರ್ಗಾದೇವಿ ದೇವಸ್ಥಾನದ ಸಮುದಾಯದ ಭವನದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅಂಜನಾದ್ರಿ ಪರ್ವತದಲ್ಲಿ ಹನುಮಮಾಲೆ ವಿಸರ್ಜನೆಗೆ ಬರುವ ಭಕ್ತರಿಗೆ ಪ್ರಸಾದ, ಕುಡಿಯುವ ನೀರು, ಸ್ನಾನ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲು ಈಗಾಗಲೇ ಜಿಲ್ಲಾಡಳಿತ ಅಧಿಕಾರಿಗಳ ಸಮಿತಿ ರಚನೆ ಮಾಡಿದೆ. ಡಿ.13ರಂದು ಗಂಗಾವತಿಯಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾವಿರಾರು ಪೊಲೀಸರು ಆಗಮಿಸಲಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲೂ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂಜನಾದ್ರಿಗೆ ತೆರಳುವ ಮಾರ್ಗದುದ್ದಕ್ಕೂ ವಿದ್ಯುತ್ ವ್ಯವಸ್ಥೆ ಮಾಡುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಐತಿಹಾಸಿಕ ಅಂಜನಾದ್ರಿ ಪರ್ವತ ಅಯೋಧ್ಯೆ ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೂಲಕ ರಸ್ತೆ, ಯಾತ್ರಿ ನಿವಾಸ, ವಿದ್ಯುತ್ ವ್ಯವಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಕೆಲವು ಕಾಮಗಾರಿ ಪ್ರಾರಂಭವಾಗಿವೆ. ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಗಂಗಾವತಿಯಿಂದ ಅಂಜನಾದ್ರಿವರೆಗೂ ರಸ್ತೆಯುದ್ದಕ್ಕೂ ಅಯೋಧ್ಯೆ ಮಾದರಿಯಲ್ಲಿ ವಿದ್ಯುತ್ ದೀಪ ಅಳವಡಿಸಲು ಕ್ರಮ ಕೈಗೊಂಡಿದ್ದೇನೆ. ಹೊಸಪೇಟೆಯ ಕಾರಿಗನೂರಿನಿಂದ ನೇರವಾಗಿ ಬುಕ್ಕಸಾಗರ, ಆನೆಗೊಂದಿ ಮೂಲಕ ಅಂಜನಾದ್ರಿವರೆಗೆ ಚತುಷ್ಪಥ ರಸ್ತೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದೇನೆ. ಅಂಜನಾದ್ರಿ ಅಭಿವೃದ್ಧಿಯ ಜೊತೆಗೆ ಗಂಗಾವತಿ ನಗರದ ಅಭಿವೃದ್ಧಿಗೂ ನಾನು ವಿಶೇಷ ಯೋಜನೆ ರೂಪಿಸಿದ್ದೇನೆ ಎಂದರು.ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಧರ್ಮ ಪರಿಷತ್ ಪ್ರಮುಖ ಸೂರ್ಯನಾರಾಯಣ, ಬಜರಂಗದಳದ ಪ್ರಾಂತ ಪ್ರಮುಖ ಪುಂಡಲೀಕರ ದಳವಾಯಿ, ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಉಗಮರಾಜ್, ಜಿಲ್ಲಾ ಸಂಚಾಲಕ ವಿನಯ ಪಾಟೀಲ್, ಮಲ್ಲಿಕಾರ್ಜುನ ಮತ್ತಿತರರು ಇದ್ದರು.
ಪೂರ್ವಭಾವಿ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಬಿಜೆಪಿ ಮುಖಂಡ ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ರಮೇಶ ಹೊಸಮಲಿ, ಯಮನೂರ ಚೌಡ್ಕಿ ಸೇರಿದಂತೆ ಬಿಜೆಪಿ ಮುಖಂಡರು, ವಿವಿಧ ಸಮಾಜದ ಹಿರಿಯರು ಭಾಗವಹಿಸಿದ್ದರು.