ಸಾರಾಂಶ
ಕ್ರಿಸ್ಮಸ್ ಗಿಡಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಕ್ರೈಸ್ತರ ಮನೆಗಳಲ್ಲಿ ಗೋದಳಿ ನಿರ್ಮಿಸಿ ಕೇಕ್ ಕತ್ತರಿಸುವ ಮೂಲಕ ಯೇಸುವಿನ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.
ಸಂತೋಷ ದೈವಜ್ಞ
ಮುಂಡಗೋಡ:ಹಿಂದೂ, ಮುಸ್ಲಿಂ, ಕ್ರೈಸ್ತ, ಟಿಬೇಟಿಯನ್, ಜೈನ್ ಸೇರಿದಂತೆ ಹತ್ತಾರು ಧರ್ಮ, ನೂರಾರು ಜಾತಿ, ಭಾವೈಕ್ಯತೆಗೆ ಹೆಸರಾಗಿ ತಾಲೂಕಿನಲ್ಲಿ ಈಗ ಕ್ರಿಸ್‌ಮಸ್‌ಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಕೊಂಕಣಿ ಭಾಷೆ ಮಾತನಾಡುವ ಕೆಥೋಲಿಕ್, ಕೇರಳ ಮೂಲದ ಮಲಯಾಳಂ ಭಾಷಿಕ ಮಲಬಾರಿ ಕ್ರಿಶ್ಚಿಯನ್, ಕ್ರಿಶ್ಚಿಯನ್ ಸಿದ್ದಿ ಹಾಗೂ ತಮಿಳು ಭಾಷಿಕ ಕ್ರಿಶ್ಚಿಯನ್ ಸೇರಿದಂತೆ ಕೆಥೋಲಿಕ್, ಮಾರ್ಥೋಮಾ, ಇಮ್ಯಾನ್ಯುಯಲ್ ಸೇರಿದಂತೆ ಹೀಗೆ ಹಲವು ಪಂಗಡಗಳ ಸಾವಿರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಜನಾಂಗ ಮುಂಡಗೋಡದಲ್ಲಿ ನೆಲೆಸಿದೆ. ತಾಲೂಕಿನ ಮೈನಳ್ಳಿ, ಕೆಂದಲಗೇರಿ, ಉಗ್ಗಿನಕೇರಿ ಮುಂತಾದ ಭಾಗದ ಅರಣ್ಯ ವಾಸಿ ಸಿದ್ದಿ ಜನಾಂಗದಲ್ಲಿಯೂ ಬಹುತೇಕ ಕ್ರಿಶ್ಚಿಯನ್ ಧರ್ಮ ಪಾಲಕರಾಗಿದ್ದಾರೆ. ಅವರಿಗೂ ಕ್ರಿಸ್‌ಮಸ್ ದೊಡ್ಡ ಹಬ್ಬವಾಗಿದೆ. ಕ್ರಿಶ್ಚಿಯನ್ ಜನಾಂಗ ಮಾತ್ರವಲ್ಲದೇ ಏಸುವಿನ ಅನುಯಾಯಿಗಳಾದ ಇತರೇ ಧರ್ಮೀಯರು ಕೂಡ ಕ್ರಿಸ್‌ಮಸ್ ಆಚರಣೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ.ಪಟ್ಟಣ ಸೇರಿದಂತೆ ಮಳಗಿ, ಮೈನಳ್ಳಿ, ಇಂದೂರ, ಶಾಂತಿನಗರ, ಅರಶಿಣಗೇರಿ ಮಲಬಾರ ಕಾಲನಿ, ಕರಗೊಳ್ಳಿ ಗ್ರಾಮ ಹೀಗೆ ತಾಲೂಕಿನಲ್ಲಿ ಹತ್ತಾರು ಚರ್ಚ್‌ಗಳಿದ್ದು, ವಿವಿಧೆಡೆ ಧರ್ಮ ಗುರುಗಳ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗಿದೆ. ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸೇರಿದಂತೆ ವಿವಿಧ ಚರ್ಚ್ ಆವರಣಗಳಲ್ಲಿ ಏಸು ಹಾಗೂ ಸೆಂಟ್ ಮೇರಿ ರೂಪವುಳ್ಳ ಗೊಂಬೆಗಳ ಗೋದಳಿ ನಿರ್ಮಿಸಲಾಗಿದೆ. ಕ್ರಿಸ್‌ಮಸ್ ಗಿಡಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಕ್ರೈಸ್ತರ ಮನೆಗಳಲ್ಲಿ ಗೋದಳಿ ನಿರ್ಮಿಸಿ ಕೇಕ್ ಕತ್ತರಿಸುವ ಮೂಲಕ ಯೇಸುವಿನ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಡಿ. ೨೫ರಂದು ಕ್ರಿಸ್‌ಮಸ್ ಗೀತೆ ಹೇಳಿ ಸಿಹಿ ತಿಂಡಿ, ತಯಾರಿಸಿ ನೆರೆ ಹೊರೆಯವರಿಗೆ ಹಂಚುವ ಮೂಲಕ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಔತಣ ಕೂಟ ನೀಡಿ ಆತಿಥ್ಯ, ಸತ್ಕಾರ ಮಾಡಲಾಗುತ್ತದೆ.
ಸರ್ವ ಜನಾಂಗಕ್ಕೆ ಸುಖ-ಶಾಂತಿ, ನೆಮ್ಮದಿ, ಪ್ರೇಮ ಮತ್ತು ವಿಶ್ವಾಸದಿಂದ ಜೀವಿಸುವುದನ್ನು ತಿಳಿಸುವುದು ಕ್ರಿಸ್‌ಮಸ್ ಹಬ್ಬದ ಮೂಲ ಉದ್ದೇಶವಾಗಿದೆ. ದೌರ್ಜನ್ಯಗಳನ್ನೆಲ್ಲ ಮೆಟ್ಟಿ ನಿಂತು ವೈರಿಗಳನ್ನು ಪ್ರೀತಿಸುವುದರೊಂದಿಗೆ ಶಾಂತಿ ಸಂದೇಶ ಸಾರುವುದು ಕ್ರಿಸ್‌ಮಸ್ ಸಂಕೇತ ಎಂದು ಅನಿಲ ಡಿಸೋಜಾ ಹೇಳಿದ್ದಾರೆ.