ಸಾರಾಂಶ
ಬೀದರ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮಂಗಳವಾರ ಮತ ಎಣಿಕೆ ನಡೆಯುವ ನಗರದ ಬಿವಿಬಿ ಕಾಲೇಜಿನ ಆವರಣಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿಯವರು ಸೋಮವಾರ ಭೇಟಿ ನೀಡಿ, ಸಂಪೂರ್ಣ ಸಿದ್ಧಗೊಂಡಿರುವ ಕ್ಷೇತ್ರವಾರು ಎಲ್ಲಾ ಮತ ಎಣಿಕಾ ಕೇಂದ್ರಗಳನ್ನು ಪರಿಶೀಲಿಸಿದರು.ಅಲ್ಲಿರುವ ಸ್ಟ್ರಾಂಗ್ ರೂಮ್‌ಗಳು, ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಗಮನಿಸಿದರು. ಸುವ್ಯವಸ್ಥಿತ ರೀತಿಯ ಮತ ಎಣಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಸಭೆ ಮತ್ತು ತರಬೇತಿ ನಡೆಸಿ ಮಾಹಿತಿ ನೀಡಲಾಗಿದೆ. ಆದ್ದರಿಂದ ಯಾವುದೇ ರೀತಿಯ ಗೊಂದಲವಿಲ್ಲದಂತೆ ಮತ ಎಣಿಕೆ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಮತ ಎಣಿಕಾ ಕೇಂದ್ರದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದರು.ಅಂದು 4ರಂದು ಬೆಳಗ್ಗೆ 7.15ಕ್ಕೆ ಸ್ಟ್ರಾಂಗ್ ರೂಮ್ ತೆಗೆಯಲಾಗುತ್ತದೆ. 8ರಿಂದ ಅಂಚೆ ಮತ ಪತ್ರಗಳ ಎಣಿಕೆ ನಡೆದು 8.30ರಿಂದ ಇವಿಎಂಗಳಲ್ಲಿರುವ ಮತ ಎಣಿಕೆ ನಡೆಯುತ್ತದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತೊಂದರೆಯಾಗದಂತೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಿಕೊಳ್ಳಲು ಆಹಾರ ಸರಬರಾಜು ವ್ಯವಸ್ಥಾಪಕರಿಗೆ ಸೂಚಿಸಿದರು.
ಮಾಧ್ಯಮ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ:ಮಾಧ್ಯಮ ಕೇಂದ್ರಕ್ಕೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭೇಟಿ ನೀಡಿ, ಎಲ್‌ಇಡಿ ಟಿವಿ, ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್‌ಗಳು, ಎಸಿ, ಎಲೆಕ್ಟ್ರಿಕಲ್ ಪಾಯಿಂಟ್ಸ್ ಹಾಗೂ ಖುರ್ಚಿಗಳ ವ್ಯವಸ್ಥೆ ಮಾಡಿರುವುದನ್ನು ಪರಿಶೀಲಿಸಿದರು.