ನಾಳೆ ಮತ ಎಣಿಕೆಗೆ ಸಕಲ ಸಿದ್ಧತೆ: ಡೀಸಿ

| Published : Jun 03 2024, 12:30 AM IST

ಸಾರಾಂಶ

ಚಾಮರಾಜನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಡೀಸಿ ಶಿಲ್ಪಾನಾಗ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರದ ಮತ ಎಣಿಕೆ ಜೂ.೪ರಂದು ನಡೆಯಲಿದ್ದು, ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಅಂಗವಾಗಿ ಜೂ.೪ರಂದು ನಗರದಲ್ಲಿ ನಡೆಯಲಿರುವ ಮತ ಎಣಿಕೆ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಚಾ.ನಗರ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಬರುವ ಹೆಚ್.ಡಿ.ಕೋಟೆ, ನಂಜನಗೂಡು, ವರುಣ, ಟಿ.ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಸದರಿ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಜೂ.೪ರಂದು ನಗರದ ನಂಜನಗೂಡು ರಸ್ತೆಯ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯ ಬೆಳಗ್ಗೆ ೮ ಗಂಟೆಗೆ ಆರಂಭವಾಗಲಿದೆ ಎಂದರು. ಮತ ಎಣಿಕೆ ಕೇಂದ್ರಕ್ಕೆ ೨೪*೭ ಅವಧಿಯಲ್ಲಿ ಐಟಿಬಿಪಿ ತಂಡದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ. ಅಗ್ನಿಶಾಮಕ ದಳದ ೮ ಸಿಬ್ಬಂದಿಯುಳ್ಳ ಒಂದು ತಂಡ ವಾಹನದೊಂದಿಗೆ ೨೪*೭ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಬಿ.ದರ್ಜೆಯ ಒಬ್ಬ ಅಧಿಕಾರಿ ೮ಗಂಟೆಗಳ ಅವಧಿಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮತ ಯಂತ್ರಗಳ ಭದ್ರತಾ ಕೊಠಡಿಯನ್ನು ಉಸ್ತುವಾರಿಗಾಗಿ ನೇಮಿಸಲಾಗಿದೆ. ಪ್ರತಿದಿನ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು ೧೪೦ ಅಧಿಕಾರಿಗಳನ್ನು ನಿಯೋಜಿಸಿದ್ದು, ನಿಯೋಜಿತ ಬಿ.ದರ್ಜೆಯ ಅಧಿಕಾರಿಗಳ ಕರ್ತವ್ಯವನ್ನು ಮೇಲ್ವಿಚಾರಣೆ ಮಾಡಲು ೬ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿರುತ್ತದೆ ಎಂದು ತಿಳಿಸಿದರು. ಅಂಚೆ ಮತಪತ್ರಗಳ ಮೂಲಕ ಒಟ್ಟು ೪೪೦೫ ಮತ ಚಲಾವಣೆಯಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ತಲಾ ೧೪ ಟೇಬಲ್ (ಮೇಜು) ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‌ಗೆ ತಲಾ ೧೪ ಮಂದಿ ಮತ ಎಣಿಕೆ ಮೇಲ್ವಿಚಾರಕರು, ೧೪ ಮಂದಿ ಎಣಿಕೆ ಸಹಾಯಕರು, ೧೪ ಮಂದಿ ಮೈಕ್ರೋ ಅಬ್ಸರ್‌ವರ್ ಹಾಗೂ ಅಂಚೆ ಮತ ಪತ್ರ ಎಣಿಕೆಗೆ ೫ ಮಂದಿ ಸೇರಿ ಒಟ್ಟು ೪೫ ಸಿಬ್ಬಂದಿ ಇರಲಿದ್ದಾರೆ. ಅಂಚೆ ಮತ ಪತ್ರ ಎಣಿಕೆಗೆ ೮ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೮ ಮಂದಿ ಏಜೆಂಟರನ್ನು ನೇಮಕ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಯು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಮ್ಮುಖದಲ್ಲಿ ನಡೆಯಲಿದೆ ಎಂದರು. ಎವಿಎಂ ಮತ ಯಂತ್ರಗಳ ಮೂಲಕ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧೪ ಏಜೆಂಟರಂತೆ ಒಟ್ಟು ೧೨೦ ಮಂದಿ ಎಣಿಕೆ ಏಜೆಂಟರನ್ನು ನೇಮಕಾತಿ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧೪ ಮತ ಎಣಿಕೆ ಟೇಬಲ್‌ಗಳಂತೆ ಒಟ್ಟು ೧೧೨ ಮತ ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿರುತ್ತದೆ. ಸದರಿ ಮತ ಎಣಿಕೆ ಟೇಬಲ್‌ಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯವನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿ ಸಮ್ಮುಖದಲ್ಲಿ ನಡೆಸಲಾಗುತ್ತದೆ.

ಸೇವಾ ಮತದಾರರು ಮತದಾನ ಮಾಡಿ ಕಳುಹಿಸಿರುವ ಮತಪತ್ರಗಳ ಎಣಿಕೆಯನ್ನು ಇಟಿಪಿಬಿಎಸ್ ತಂತ್ರಾಂಶದಲ್ಲಿ ನಡೆಸಲು ೨ ಮತ ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ. ನಮೂನೆ-೧೮ ರಲ್ಲಿ ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಲು ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಎಣಿಕೆ ನಡೆಯುವ ಸ್ಥಳ, ಎಣಿಕೆ ಕಾರ್ಯದ ಸಮಯ ಮತ್ತು ಎಣಿಕೆ ಕಾರ್ಯ ನಡೆಸುತ್ತಿರುವ ಟೇಬಲ್‌ಗಳ ವಿವರವನ್ನು ನೀಡಲಾಗಿದೆ. ಸಾಲಾಗಿ ಜೋಡಿಸಿದ ಟೇಬಲ್‌ಗಳ ಮೇಲೆ ಮತ ಎಣಿಕೆ ನಡೆಸಲಾಗುತ್ತದೆ. ಪ್ರತಿಯೊಂದು ಸಾಲಿನಲ್ಲಿರುವ ಟೇಬಲ್‌ಗಳ ಕ್ರಮ ಸಂಖ್ಯೆ ಕೊಡಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್ ಬಳಿ ಮತ ಎಣಿಕೆ ಏಜೆಂಟರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತ ಎಣಿಕೆ ಸಭಾಂಗಣದಲ್ಲಿ ಮತ ಎಣಿಕೆಯ ಏಜೆಂಟರಿಗೆ ಇವಿಎಂ ಕೈಗೆಟುಕದಂತೆ ಪ್ರತಿಯೊಂದು ಎಣಿಕೆ ಟೇಬಲ್‌ಗೆ ಬ್ಯಾರಿಕೇಟ್ ಮತ್ತು ತಂತಿ ಮಷಿನ್ ಅಳವಡಿಸಲಾಗಿರುತ್ತದೆ. ಮತ ಎಣಿಕೆ ಏಜೆಂಟರಿಗೆ ಎಣಿಕೆಯ ಸಮಗ್ರ ಪ್ರಕ್ರಿಯೆಯನ್ನು ನೋಡಲು ಮುಕ್ತ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಎಣಿಕೆ ಟೇಬಲ್‌ಗಳಿಗೆ ನೀಡಲಾಗುವ ಕಂಟ್ರೋಲ್ ಯುನಿಟ್ ಜೊತೆಗೆ ಸದರಿ ಮತ ಕೇಂದ್ರಕ್ಕೆ ಸಂಬಂಧಿಸಿದಂತೆ ನಮೂನೆ-೧೭ಸಿ ರಲ್ಲಿ ದಾಖಲಾದ ಮತಗಳಿಗೆ ಸಂಬಂಧಿಸಿದ ಲೆಕ್ಕವನ್ನು ಎಣಿಕೆ ಟೇಬಲ್‌ಗಳಿಗೆ ನೀಡಿ, ೧೭ಸಿ ಪಾರ್ಟ್-೨ ರಲ್ಲಿ ಮತದಾನವಾದ ಮತಗಳ ವಿವರವನ್ನು ದಾಖಲಿಸಲಾಗುತ್ತದೆ. ಅಂಚೆ ಮತಪತ್ರಗಳ ಎಣಿಕೆಯು ಪ್ರಾರಂಭವಾದ ೩೦ ನಿಮಿಷಗಳ ನಂತರ, ಇವಿಎಂ ಮತ ಎಣಿಕೆಯನ್ನು ಪ್ರಾರಂಭಿಸಲಾಗುತ್ತದೆ ಎಂದರು.ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು ಮತ್ತು ಸೂಕ್ಷ್ಮವೀಕ್ಷಕರು ಭಾರತ ಚುನಾವಣಾ ಆಯೋಗದಿಂದ ಅಧಿಕೃತಗೊಳಿಸಲಾದ ವ್ಯಕ್ತಿಗಳು ಮತ್ತು ವೀಕ್ಷಕರು, ಚುನಾವಣೆಗೆ ಸಂಬಂಧಿಸಿದಂತೆ ಕರ್ತವ್ಯದ ಮೇಲಿರುವ ಸರ್ಕಾರಿ ನೌಕರರು, ಅಭ್ಯರ್ಥಿಗಳು ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರು, ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರ ಕಾರ್ಯ ವಿಧಾನವನ್ನು ಅನುಸರಿಸಿ ಟೇಬಲ್‌ಗಳಿಗೆ ನಿಯೋಜಿಸಿ ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಮತ ಎಣಿಕೆಯ ಏಜೆಂಟರು ಮತ ಎಣಿಕೆ ಕಾರ್ಯಕ್ಕೆ ಅವರು ಹಾಜರಾದಾಗ ತಮ್ಮ ನೇಮಕಾತಿ ಪತ್ರದ ಜೊತೆಗೆ (ನಮೂನೆ-೧೮) ತಮ್ಮ ಗುರುತಿನ ಚೀಟಿಯನ್ನು ಮತಗಳ ಎಣಿಕೆಗಾಗಿ ನಿಗದಿಪಡಿಸಿರುವ ಸಮಯಕ್ಕೆ (೦೪.೦೬.೨೦೨೪ ರಂದು ಬೆಳಗ್ಗೆ ೮-೦೦ ಗಂಟೆ) ಕನಿಷ್ಠ ಪಕ್ಷ ಒಂದು ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಸಮಯಕ್ಕೆ ಮೀರಿ ಸಲ್ಲಿಸಲ್ಪಟ್ಟ ಯಾವುದೇ ನೇಮಕಾತಿ ಪತ್ರಗಳನ್ನು ಅಂಗೀಕರಿಸಲಾಗುವುದಿಲ್ಲ. ಮತ ಎಣಿಕೆ ಏಜೆಂಟರಿಗೆ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಐಫೋನ್, ಲ್ಯಾಪ್ ಟಾಪ್ ಅಥವಾ ಅಥವಾ ವಿಡಿಯೋ (ಶ್ರವ್ಯ-ದೃಶ್ಯ) ಚಿತ್ರೀಕರಣ ಮಾಡಿ ದಾಖಲಿಸುವಂತಹ ಯಾವುದೇ ವಿದ್ಯುನ್ಮಾನ ಸಾಧನಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರ್‍ಯಾಂಡಂ ಆಗಿ ಆಯ್ಕೆ ಮಾಡಿದ ೫ ಮತಗಟ್ಟೆಗಳ ವಿವಿ ಪ್ಯಾಟ್ ಪೇಪರ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ಎಣಿಕೆ ಕಾರ್ಯ ನಡೆಸಲಾಗುವ ಎಲ್ಲಾ ೮ ವಿಧಾನಸಭಾ ಕ್ಷೇತ್ರಗಳ ಕೊಠಡಿಗಳಲ್ಲಿ ವೆಬ್ ಕಾಸ್ಟಿಂಗ್ ಕಾರ್ಯ ನಡೆಸಲಾಗುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಾದ ಟಿ.ವಿ, ಇಂಟರ್ ನೆಟ್ ಸೇರಿದಂತೆ ಅಗತ್ಯ ತಾಂತ್ರಿಕ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಚುನಾವಣಾಧಿಕಾರಿ ಶಿಲ್ಪಾನಾಗ್ ತಿಳಿಸಿದರು. ಇದೇ ವೇಳೆ ಮಾತನಾಡಿದ ಎಸ್ಪಿ ಪದ್ಮಿನಿ ಸಾಹು, ಸ್ಟ್ರಾಂಗ್ ರೂಂ ಭದ್ರತೆಗಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆ ಕಾರ್ಯಕ್ಕಾಗಿ ಕೆ.ಎಸ್.ಆರ್.ಪಿ ಹಾಗೂ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. ೮೦ ಅಧಿಕಾರಿಗಳು, ೩೦೦ ಸಿಬ್ಬಂದಿ ಹಾಗೂ ೩೫೦ ಮಂದಿ ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಡಿಸಿ ಗೀತಾ ಹುಡೇದ ಇದ್ದರು.