ಬಿರುಗಾಳಿ, ಮಳೆಗೆ ತತ್ತರಿಸಿದ ಬೆಂಗಳೂರು!

| Published : Jun 03 2024, 12:30 AM IST / Updated: Jun 03 2024, 08:52 AM IST

bengaluru rain
ಬಿರುಗಾಳಿ, ಮಳೆಗೆ ತತ್ತರಿಸಿದ ಬೆಂಗಳೂರು!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರಾದ್ಯಂತ ಭಾನುವಾರ ಭಾರಿ ಮಳೆಯಾಗಿ ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ಥವಾಗಿತ್ತು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಅಬ್ಬರ ಎರಡನೇ ದಿನವೂ ಮುಂದುವರೆದಿದ್ದು, ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತು.

ಬೃಹತ್‌ ಮರದ ಕೊಂಬೆಯೊಂದು ಮೆಟ್ರೋ ಹಳಿಯ ಮೇಲೆ ಬಿದ್ದ ಪರಿಣಾಮ ಮೆಟ್ರೋ ಸಂಚಾರಕ್ಕೆ ಅಡಚಣೆ ಉಂಟು ಮಾಡಿತು. ನಗರದಲ್ಲಿ ನೂರಾರು ಸಂಖ್ಯೆಯ ಮರಗಳು ಬುಡಮೇಲಾಗಿ ಧರೆಗುರುಳಿದ ಪರಿಣಾಮ ಕಾರು, ಆಟೋ, ಬೈಕ್‌ ಸೇರಿದಂತೆ ಹಲವು ವಾಹನಗಳು ಜಖಂಗೊಂಡ ವರದಿಯಾಗಿದೆ.

ಶನಿವಾರ ಮಧ್ಯಾಹ್ನದಿಂದ ನಗರದಲ್ಲಿ ಆರಂಭಗೊಂಡ ಮಳೆ ಮಧ್ಯರಾತ್ರಿವರೆಗೆ ಧಾರಾಕಾರವಾಗಿ ಸುರಿದಿತ್ತು. ಮತ್ತೆ ಭಾನುವಾರ ಸಂಜೆಯಿಂದ ಎಡಬಿಡದೇ ನಗರದಾದ್ಯಂತ ಮಳೆ ಸುರಿಯಿತು. ಗುಡುಗು, ಮಿಂಚು, ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಗರದಲ್ಲಿ ಜನಜೀವನ ತೊಂದರೆ ಉಂಟಾಯಿತು.

ಮೆಟ್ರೋ ಸಂಚಾರ ಸ್ಥಗಿತ:  ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಟ್ರಿನಿಟಿ ನಿಲ್ದಾಣದ ನಡುವಿನ ಮೆಟ್ರೋ ಮಾರ್ಗದ ಹಳಿಯ ಮೇಲೆ ಬೃಹತ್‌ ಗಾತ್ರದ ಮರ ಕೊಂಬೆ ಬಿದ್ದ ಪರಿಣಾಮ ಎಂ.ಜಿ.ರಸ್ತೆಯಿಂದ ಇಂದಿರಾ ನಗರ ನಡುವಿನ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಇಂದಿರಾ ನಗರದಿಂದ ವೈಟ್‌ಫಿಲ್ಡ್‌ ಹಾಗೂ ಎಂ.ಜಿ.ರಸ್ತೆಯಿಂದ ಚಲಘಟ್ಟ ನಡುವೆ ಮಾತ್ರ ಮೆಟ್ರೋ ಸಂಚಾರ ನಡೆಸಲಾಯಿತು. ಬಿಬಿಎಂಪಿ ಮತ್ತು ಮೆಟ್ರೋ ಸಿಬ್ಬಂದಿ ಮರದ ಕೊಂಬೆ ತೆರವುಗೊಳಿಸಿದರು.

ಮರ ತೆರವು ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಟ್ರಿನಿಟಿ ವೃತ್ತದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ರಸ್ತೆಗೆ ಬ್ಯಾರಿಕೇಡ್‌ ಅಳವಡಿಕೆ ಮಾಡಲಾಗಿತ್ತು. ಇದರಿಂದ ಎಂ.ಜಿ.ರಸ್ತೆ ಸುತ್ತಮುತ್ತದ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ವಾಹನ ಸವಾರರು ಸಂಚಾರ ದಟ್ಟಣೆ ಎದುರಿಸಬೇಕಾಯಿತು.

ದಶಕದ ಬಳಿಕ ಕಿನೋ ಅಂಡರ್‌ಪಾಸ್‌ ಜಲಾವೃತ

ಕಳೆದ 10 ವರ್ಷದ ಹಿಂದೆ ಪ್ರತಿ ಬಾರಿ ಮಳೆ ಬಂದಾಗಲೂ ಶೇಷಾದ್ರಿಪುರದ ಕಿನೋ ಚಿತ್ರಮಂದಿರದ ಮುಂಭಾಗದ ಅಂಡರ್‌ ಪಾಸ್‌ನಲ್ಲಿ ಬಸ್‌, ಕಾರು, ಬೈಕ್‌ ಸೇರಿದಂತೆ ವಾಹನ ಮುಳುಗಡೆಯ ಸಮಸ್ಯೆ ಎದುರಿಸಲಾಗುತ್ತಿತ್ತು. ಇದೀಗ 10 ವರ್ಷದ ಬಳಿಕ ಕಿನೋ ಅಂಡರ್‌ ಪಾಸ್‌ ಮತ್ತದೇ ಸಮಸ್ಯೆ ಉಂಟಾಗಿದೆ. ಬಿಎಂಟಿಸಿ ಬಸ್‌ ಅಂಡರ್‌ ಪಾಸ್‌ನಲ್ಲಿ ಸಿಲುಕಿಕೊಂಡು ಆತಂಕ ಸೃಷ್ಟಿಯಾಗಿತ್ತು. ಬಸ್‌ ಚಾಲಕ ಮುನ್ನೆಚ್ಚರಿಕೆಯ ಫಲವಾಗಿ 20 ಪ್ರಯಾಣಿಕರು ಸುರಕ್ಷಿತವಾಗಿ ಬಸ್‌ನಿಂದ ಕೆಳಗೆ ಇಳಿಸಿದ ಘಟನೆ ನಡೆದಿದೆ.

ಕಾರು, ಆಟೋ, ಬೈಕ್‌ ಜಖಂ

ಮಳೆಯೊಂದಿಗೆ ಭಾರೀ ಪ್ರಮಾಣ ಗಾಳಿ ಬಿಸಿದ ಪರಿಣಾಮದ ನಗರದಲ್ಲಿ ಬರೋಬ್ಬರಿ 400ಕ್ಕೂ ಅಧಿಕ ಮರ ಮತ್ತು ಮರದ ಕೊಂಬೆಗಳು ಧರೆಗುರುಳಿವೆ. ಮರಗಳು ಬಿದ್ದ ಪರಿಣಾಮ ಜಯನಗರ, ಪದ್ಮನಾಭನಗರ ಸೇರಿದಂತೆ ವಿವಿಧ ಕಾರು ಜಖಂಗೊಂಡಿವೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆಟೋ ಮೇಲೆ ಮರ ಬಿದ್ದಿದೆ. ಹುಳಿಮಾವು ರಸ್ತೆಯಲ್ಲಿ ದೊಡ್ಡ ಗಾತ್ರದ ಮರ ಬುಡಮೇಲಾಗಿ ಬಿದ್ದ ಪರಿಣಾಮ 10 ಬೈಕ್‌ ಹಾಗೂ ಪಾನಿಪೂರಿ ಗಾಡಿ ಜಖಂಗೊಂಡ ವರದಿಯಾಗಿದೆ.

ಬನಶಂಕರಿ, ಸಂಜಯ್‌ ಗಾಂಧಿ ಆಸ್ಪತ್ರೆಯ ಬಳಿ, ಜಯನಗರ, ಮೆಟ್ರೋ ನಿಲ್ದಾಣ ಸಮೀಪ, ಯಶವಂತಪುರ, ಕಮಲನಗರ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ರಸ್ತೆ ಮರ ಮತ್ತು ಮರದ ಕೊಂಬೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.ನದಿಗಳಾದ ರಸ್ತೆಗಳು

ಧಾರಾಕಾರ ಮಳೆಗೆ ರಾಜಧಾನಿಯ ರಸ್ತೆಗಳು ಅಕ್ಷರಶಃ ರಸ್ತೆಗಳು ನದಿಗಳಂತೆ ತುಂಬಿ ಹರಿದ ದೃಶ್ಯಗಳು ಕಂಡು ಬಂದವು. ಶಕ್ತಿಸೌಧ ವಿಧಾನಸೌಧದ ಮುಂಭಾಗದ ಅಂಬೇಡ್ಕರ್‌ ವೀದಿಯಲ್ಲಿಯೇ ಸಮಾರು 1 ರಿಂದ 2 ಅಡಿಯಷ್ಟು ನೀರು ಹರಿಯುತ್ತಿತ್ತು. ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗಾ ರಸ್ತೆ, ಶಾಂತಿನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭನಗರ, ಒಆರ್‌ಆರ್ ರಸ್ತೆ. ಬೆನ್ನಿಗಾನಹಳ್ಳಿ ರೈಲ್ವೆ ಮೇಲ್ಸೇತುವೆ, ಕೆಂಪೇಗೌಡ ಬಸ್​ ನಿಲ್ದಾಣ, ಶಿವಾಜಿನಗರ, ಕೆಆರ್ ವೃತ್ತ, ಎಂಜಿ ರಸ್ತೆ, ಕೆಆರ್ ಮಾರುಕಟ್ಟೆ, ವೈಟ್‌ಫೀಲ್ಡ್ ಸೇರಿದಂತೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.

ಕಸ್ತೂರಿನಗರ ಕಡೆಯಿಂದ ಎಂಎಂಟಿ ಜಂಕ್ಷನ್‌ನಿಂದ ಕೆ.ಆರ್.ಪುರ ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಕಡೆಗೆ ಹೋಗುವ ವಾಹನ ಸವಾರರಿಗೆ ತೊಂದರೆ ಉಂಟಾಗಿತು.

ಜಯಮಹಲ್ ಮುಖ್ಯರಸ್ತೆ ಬಳಿ ನೀರು ನಿಂತುಕೊಂಡಿತ್ತು. ಟಿನ್‌ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಮಳೆ ನೀರು ನಿಂತು ರಾಮಮೂರ್ತಿ ನಗರದ ಕಡೆಗೆ ಹೋಗುವ ವಾಹನ ಸವಾರರಿಗೆ ಸಮಸ್ಯೆ ಎದುರಾಯಿತು.

ಇನ್ನು ಅಂಡರ್‌ ಪಾಸ್‌ ಮತ್ತು ಫ್ಲೈಓವರ್‌ ನಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಯಾಗಿ ಸಮಸ್ಯೆ ಉಂಟಾಗಿತ್ತು.

ಮನೆಗಳಿಗೆ ನುಗ್ಗಿದ ನೀರು

ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ ತಗ್ಗುಪ್ರದೇಶದಲ್ಲಿ ಮಳೆ ನೀರು ಶೇಖರಣೆಯಾದ ಪರಿಣಾಮ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ಇನ್ನು ರಾಜಕಾಲುವೆ ಅಕ್ಕ-ಪಕ್ಕದ ಬಡಾವಣೆ ಮತ್ತು ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾದ ಬಗ್ಗೆ ದೂರು ವ್ಯಕ್ತವಾಗಿವೆ.ಮರ ಬಿದ್ದ ವಿವರ

ಭಾನುವಾರ ಮಳೆಗೆ ಮರ ಮತ್ತು ಕೊಂಬೆ ಬಿದ್ದ ವಿವರ (ಬಿಬಿಎಂಪಿ ಮಾಹಿತಿ)ವಲಯ ಮರ ಕೊಂಬೆ 

ದಕ್ಷಿಣ4015

ಆರ್‌.ಆರ್‌.ನಗರ1514

ಬೊಮ್ಮನಹಳ್ಳಿ1012

ಮಹದೇವಪುರ511

ಯಲಹಂಕ1235

ಪಶ್ಚಿಮ1914

ಪೂರ್ವ1215ದಾಸರಹಳ್ಳಿ512

ಒಟ್ಟು118128

ದೂರುಗಳ ಸುರಿ ಮಳೆ

ನಗರದಲ್ಲಿ ಮಳೆ ಆರಂಭಗೊಳ್ಳುತ್ತಿದಂತೆ ಬಿಬಿಎಂಪಿ ಸಹಾಯವಾಣಿ ಸಂಖ್ಯೆಗೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಬಂದಿದೆ. ಸಂಜೆ 4ರಿಂದ ರಾತ್ರಿ 10 ಗಂಟೆ ಅವಧಿಯಲ್ಲಿ ಬರೋಬ್ಬರಿ 300ಕ್ಕೂ ಅಧಿಕ ದೂರುಗಳು ಬಂದಿವೆ. ಮರ ಮತ್ತು ಮರದ ಕೊಂಬೆ ಬಿದ್ದಿರುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆ ದೂರುಗಳು ದಾಖಲಾಗಿವೆ. ಉಳಿದಂತೆ ಸುಮಾರು 50 ದೂರು ನೀರು ನಿಂತಿರುವುದಕ್ಕೆ ಸಂಬಂಧಿಸಿದ ದೂರುಗಳಾಗಿವೆ.ಅಧಿಕಾರಿಗಳು ಭೇಟಿ

ಭಾರೀ ಮಳೆ ಸುರಿದು ನಗರದಲ್ಲಿ ಅನಾಹುತ ಸೃಷ್ಟಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿ ಸಿಬ್ಬಂದಿಯು ಮರ ತೆರವು ಕಾರ್ಯಚರಣೆ, ರಸ್ತೆಯಲ್ಲಿ ನಿಂತಿರುವ ನೀರು ತೆರವುಗೊಳಿಸುವ ಕಾರ್ಯವನ್ನು ಪರಿಶೀಲನೆ ನಡೆಸಿದರು.