ಮೇ 7ರ ಚುನಾವಣೆಗೆ ಸಕಲ ಸಿದ್ಧತೆ: ಡಿಸಿ ಗುರುದತ್ತ ಹೆಗಡೆ

| Published : May 05 2024, 02:05 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ 17,52,885 ಮತದಾರರಿದ್ದು, ಈ ಪೈಕಿ 8,62,789 ಪುರುಷ, 8,90,061 ಮಹಿಳಾ ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಲು ಸಹಕಾರಿಯಾಗುವಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ 325 ಸೂಕ್ಷ್ಮ ಹಾಗೂ 87 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಇಲ್ಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ 2037 ಮತದಾನ ಕೇಂದ್ರಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 17,52,885 ಮತದಾರರಿದ್ದು, ಈ ಪೈಕಿ 8,62,789 ಪುರುಷ, 8,90,061 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮತಗಟ್ಟೆಗೆ ಮತದಾರರನ್ನು ಸೆಳೆಯಲು 40 ಸಖಿ ಮತದಾನ ಕೇಂದ್ರಗಳು, ಯುವ ಮತದಾರರಿಗೆ 8, ವಿಶೇಷ ಚೇತನರಿಗೆ 8 ಮಾದರಿ ಮತಗಟ್ಟೆಗಳು, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಲು ಸಹಕಾರಿಯಾಗುವಂತೆ ಬೇರೆ ಊರುಗಳಿಂದ ಪ್ರಚಾರಕ್ಕೆ ಆಗಮಿಸಿದವರು 48 ಗಂಟೆಗಳ ಮುಂಚೆ ಜಿಲ್ಲೆಯನ್ನು ತೊರೆಯಬೇಕು. ನಾಳೆ ಸಂಜೆ 5 ಗಂಟೆ ನಂತರ ಬಹಿರಂಗ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ಮದ್ಯ ನಿಷೇಧ: ಮೇ 6ರ ಬೆಳಿಗ್ಗೆಯಿಂದ ಮೇ 7 ಮಧ್ಯರಾತ್ರಿವರೆಗೆ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ತಪಾಸಣೆಗಳನ್ನು ತೀವ್ರ ಗೊಳಿಸಲಾಗಿದೆ. ಈವರೆಗೆ 19 ಕೋಟಿ ರು. ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಮನೆಯಿಂದ ಮತದಾನ: 3,579 ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅನುಮೋದಿಸಲಾಗಿದ್ದು, ಈ ಪೈಕಿ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಹಾಗೂ ಶೇ. 40ಕ್ಕಿಂತ ಹೆಚ್ಚಿನ ದಿವ್ಯಾಂಗವಿರುವ ಮತದಾರರು ತಮ್ಮ ಮನೆಯಿಂದ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು. ಮೇ 6 ಕಡೆಯ ದಿನ: ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ-2024 ರ ಸಂಬಂಧ ಚುನಾವಣಾ ವೇಳಾಪಟ್ಟಿ ಪ್ರಕಟಣೆ ಗೊಂಡಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಮೇ 6 ಕಡೆ ದಿನವಾಗಿದೆ ಎಂದು ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ತಿಳಿಸಿದ್ದಾರೆ.

ಮತದಾನ ನಡೆಯುವ 48 ಗಂಟೆಗೂ ಮುನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಹೊರತುಪಡಿಸಿ, ಉಳಿದೆಲ್ಲಾ ಸ್ಟಾರ್ ಪ್ರಚಾರಕರು ಹಾಗೂ ಇತರೆ ರಾಜಕೀಯ ಸಂಬಂಧಿ ವ್ಯಕ್ತಿಗಳು ಲೋಕಸಭಾ ಕ್ಷೇತ್ರದಿಂದ ತೆರಳಬೇಕು. ಎಲ್ಲಾ ಬಹಿರಂಗ ರಾಜಕೀಯ ಪ್ರಚಾರ ಸಭೆ, ಸಮಾವೇಶ, ರ್‍ಯಾಲಿಗಳನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಕಾಲ್ನಡಿಗೆಯಲ್ಲಿ ಮತಯಾಚಿಸಲು ಅವಕಾಶವಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮತ್ತಿತರರು ಇದ್ದರು.ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೆ ಏರಲಿ: ಸಿಇಒ ಸ್ನೇಹಲ್ ಲೋಖಂಡೆ

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಆಶಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏ.4 ರಂದು ನಗರದ ಅಲ್ಲಮ ಪ್ರಭು (ಫ್ರೀಡಂ ಪಾರ್ಕ್‌) ಮೈದಾನದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಹಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಶೇ.100 ರಷ್ಟು ಮತದಾನ ಆಗಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅನೇಕ ಕಾರ್ಯಕ್ರಮಗಳು, ವಿಶಿಷ್ಟವಾದ, ವಿಭಿನ್ನವಾದ ಚಟುವಟಿಕೆಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದ್ದು, ಮತದಾರರು ತಪ್ಪದೇ ಮತದಾನ ಕಾರ್ಯದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸ್ಪರ್ಧೆ ವಿಜೇತರಾದವರಿಗೆ ಬಲೂನ್ ಹಾರಾಟಕ್ಕೆ ಅವಕಾಶ: ಮತದಾನ ಜಾಗೃತಿ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇಂದು ವಿಶೇಷವಾಗಿ ಏರ್ಪಡಿಸಲಾಗಿದ್ದ ಹಾಟ್‍ಏರ್ ಬಲೂನ್ ಹಾರಾಟದಲ್ಲಿ ಅವಕಾಶ ನೀಡಿ ಅಭಿನಂದಿಸಲಾಯಿತು.ವಿಜಯ ಕರ್ನಾಟಕ ಕ್ವಿಜ್ ವಿಜೇತರು, ರೇಡಿಯೋ ಕ್ವಿಜ್ ವಿಜೇತರು, ರಾಷ್ಟ್ರ ಮಟ್ಟದ ಕ್ವಿಜ್ ವಿಜೇತರು, ಕ್ರಿಕೆಟ್ ಪಂದ್ಯಾವಳಿ ವಿಜೇತರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಮಾಧ್ಯಮ ತಂಡದವರಿಗೆ ಹಾಗೂ ಸಾರ್ವಜನಿಕರಿಗೆ ಏರ್ ಬಲೂನ್‌ನಲ್ಲಿ ಹಾರಾಟ ನಡೆಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ರಂಗನಾಥ್, ವಾರ್ತಾಧಿಕಾರಿ ಆರ್‌.ರಾಜು , ಚುನಾವಣಾ ಐಕಾನ್ ಡಾ.ಶುಬ್ರತಾ, ಜ್ಯೋತಿ, ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೇಜ್ ಸೇರಿದಂತೆ ಹಲವರು ಇದ್ದರು.