ಸಾರಾಂಶ
ರಾಯಚೂರು ನಗತ ತಹಸೀಲ್ದಾರ್ ಕಚೇರಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನಿಯೋಜಿತ ಸಿಬ್ಬಂದಿ ಮತದಾನದ ಸಾಮಗ್ರಿ ಪಡೆದು ಪರಿಶೀಲಿಸಿಕೊಂಡರು.
ಕನ್ನಡಪ್ರಭ ವಾರ್ತೆ ರಾಯಚೂರು
ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆಗೆ ರಾಯಚೂರು ಜಿಲ್ಲೆಯಲ್ಲಿ ಸಕಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಯಚೂರು ನಗರ ಕಚೇರಿ ಸೇರಿ ವಿವಿಧ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಮತದಾನ ಪ್ರಕ್ರಿಯೆಗೆ ಅಗತ್ಯವಾದ ಮತಪೆಟ್ಟಿಗೆ, ಮುದ್ರಿತ ಕಾಗದ, ಶಾಹಿ ಸೇರಿ ಇತರೆ ಸಾಮಗ್ರಿ ವಿತರಿಸಲಾಯಿತು.ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ 30 ಮತಗಟ್ಟೆ ಕೇಂದ್ರ ಸ್ಥಾಪಿಸಿದ್ದು, ತಲಾ 41 ಮತಗಟ್ಟೆ ಚುನಾವಣಾಧಿಕಾರಿ (ಪಿಆರ್‌ಒ) ಸಹಾಯಕ ಮತಗಟ್ಟೆ ಚುನಾವಣಾಧಿಕಾರಿ (ಎಪಿಆರ್‌ಒ) ಮತ್ತು 82 ಮತಗಟ್ಟೆ ಅಧಿಕಾರಿ(ಪಿಒ) ನಿಯುಕ್ತಿಗೊಳಿಸಲಾಗಿದೆ.
ಜಿಲ್ಲೆಯ ಆಯಾ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಮತದಾನಕ್ಕೆ ನಿಯೋಜಿನೆಗೊಂಡ ಅಧಿಕಾರಿ, ಸಿಬ್ಬಂದಿಗೆ ಮತದಾನಕ್ಕೆ ಅಗತ್ಯ ಸಾಮಗ್ರಿಗಳನ್ನು ಆಯಾ ತಹಸೀಲ್ದಾರರು ರವಿವಾರ ವಿತರಿಸಿದರು.ಪೂರ್ವ ಸಿದ್ಧತೆ ಪರಿಶೀಲನೆ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾನದ ಪೂರ್ವಸಿದ್ಧತೆಯನ್ನು ತಹಸೀಲ್ದಾರ್ ಸುರೇಶ ವರ್ಮಾ ರವಿವಾರ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ರಾಯಚೂರು ತಾಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾನಕ್ಕೆ ರಾಯಚೂರು ನಗರದಲ್ಲಿ 5 ಮತಗಟ್ಟೆ ಹಾಗೂ ಗ್ರಾಮಾಂತರ ಭಾಗದಲ್ಲಿ 2 ಸೇರಿ ಒಟ್ಟು ರಾಯಚೂರು ತಾಲೂಕಿನಲ್ಲಿ 7 ಮತಗಟ್ಟೆಗಳಲ್ಲಿ ಮತದಾನ ಮಾಡಬಹುದಾಗಿದೆ.ಉಳಿದಂತೆ ರಾಯಚೂರು ತಾಲೂಕಿನಲ್ಲಿ 4,185 ಪುರುಷ, 2,704 ಮಹಿಳಾ ಮತದಾರರು ಸೇರಿ ಒಟ್ಟು 6,891 ಮತದಾರರಿದ್ದು, ಸೋಮವಾರ ನಡೆಯುವ ಮತದಾನ ಪ್ರಕ್ರಿಯೆಗಾಗಿ ಎಲ್ಲಾ ರೀತಿ ಸಿದ್ಧತೆ ಕೈಗೊಳ್ಳಲಾಗಿದೆ.
ಈ ವೇಳೆ ಮತದಾರರ ತರಬೇತುದಾರ ಸದಾಶಿವಪ್ಪ, ಗ್ರಾಡ್- ತಹಶೀಲ್ದಾರ ಸೇರಿದಂತೆ ಇನ್ನಿತರರಿದ್ದರು.