ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ, ಬಿಗಿ ಬಂದೋಬಸ್ತ್‌

| Published : Mar 17 2024, 01:45 AM IST

ಸಾರಾಂಶ

ಕ್ಷೇತ್ರದಲ್ಲಿ 85 ವರ್ಷಕ್ಕೂ ಮೇಲ್ಪಟ್ಟ 18,809 ಮತದಾರರು ಹಾಗೂ ವಿಕಲಚೇತನ 26559 ಮತದಾರರಿದ್ದು, ಅವರೆಲ್ಲರ ಮಾಹಿತಿಯನ್ನು ಪಡೆದು ಇಚ್ಚಿಸಿದವರಿಗೆ ಮನೆ ಮತದಾನಕ್ಕೂ ಸಹ ಅವಕಾಶ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2024ರ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆಯ ಪಾಲನೆಗೆ ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ “ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಕುರಿತು”ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಏಪ್ರಿಲ್‌ 26ರಂದು ಚುನಾವಣೆಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಡಿಸುವ ದಿನಾಂಕ ಮಾರ್ಚ್ 28, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 04, ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಏಪ್ರಿಲ್ 05, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 08 ಮತ್ತು ಮತದಾನ ನಡೆಯುವ ದಿನಾಂಕ ಏಪ್ರಿಲ್ 26, ಮತ ಎಣಿಕೆ ದಿನಾಂಕ ಜೂನ್ 04 ಹಾಗೂ ಚುನಾವಣೆ ಮುಕ್ತಾಯಗೊಳ್ಳುವ ದಿನಾಂಕ ಜೂನ್ 6 ಆಗಿರುತ್ತದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಕ್ಷೇತ್ರದಲ್ಲಿ ಒಟ್ಟು 19,66,067 ಮತದಾರರಿದ್ದು, ಈ ಪೈಕಿ 9,76,436 ಪುರುಷರು, 9,89,369 ಮಹಿಳೆಯರು ಹಾಗೂ 262 ತೃತೀಯ ಲಿಂಗಿ ಮತದಾರರಿದ್ದಾರೆ. ಮಾರ್ಚ್ 25 ರೊಳಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನೋಂದಣಿಯಾಗುವ ಮತದಾರರಿಗೂ ಸಹ ಮತದಾನಕ್ಕೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ 85 ವರ್ಷಕ್ಕೂ ಮೇಲ್ಪಟ್ಟ 18,809 ಮತದಾರರು ಹಾಗೂ ವಿಕಲಚೇತನ 26559 ಮತದಾರರಿದ್ದು, ಅವರೆಲ್ಲರ ಮಾಹಿತಿಯನ್ನು ಪಡೆದು ಇಚ್ಚಿಸಿದವರಿಗೆ ಮನೆ ಮತದಾನಕ್ಕೂ ಸಹ ಅವಕಾಶ ಕಲ್ಪಿಸಲಾಗುವುದು. ಮತದಾನ ಮಾಡಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳನ್ನು ಸಿದ್ದಪಡಿಸಿಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿರುತ್ತದೆ. ಈ ಪೈಕಿ 44 ಅತೀ ಸೂಕ್ಷ್ಮ ಹಾಗೂ 382 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 2,326 ಮತಗಟ್ಟೆಗಳ ಪೈಕಿ ಶೇ. 50 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಚೆಕ್ ಪೋಸ್ಟ್ ಗಳು:ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 37 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಅಕ್ರಮ ಹಣ, ಮದ್ಯ, ಬಹುಮಾನ ನೀಡುವ ವಸ್ತುಗಳು ಸೇರಿದಂತೆ ಎಲ್ಲಾ ಅಕ್ರಮ ಸಾಗಾಟವನ್ನು ತಡೆಗಟ್ಟಲು ಇಂದಿನಿಂದಲೆ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಎಲ್ಲಾ ಚೆಕ್ ಪೋಸ್ಟ್ ಗಳಿಗೆ 3 ಪಾಳಿಗಳಲ್ಲಿ ಅಧಿಕಾರಿಗಳನ್ನು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ ಈ ಎಲ್ಲಾ ಕಾರ್ಯಗಳನ್ನು ನಿಗಾಯಿಡಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಡಿ.ಎಲ್.ನಾಗೇಶ್, ಅಪರ ಡೀಸಿ ಡಾ.ಎನ್.ತಿಪ್ಪೇಸ್ವಾಮಿ, ಚುನಾವಣಾ ತಹಸೀಲ್ದಾರ್ ಮುನಿಶಾಮಿರೆಡ್ಡಿ ಹಾಗೂ ಮತ್ತಿತರರು ಇದ್ದರು.